ADVERTISEMENT

‘ದೇಶದ ಆಹಾರ ಭದ್ರತೆಗೆ ಕೊಡುಗೆ ನೀಡುವ ಆಸೆ’

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 20:30 IST
Last Updated 9 ಫೆಬ್ರುವರಿ 2018, 20:30 IST
ಹೆಚ್ಚು ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿಗಳ ಸಂಭ್ರಮ
ಹೆಚ್ಚು ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿಗಳ ಸಂಭ್ರಮ   

ಬೆಂಗಳೂರು: ‘ದೇಶದ ಆಹಾರ ಭದ್ರತೆಗೆ ಏನಾದರೂ ಕೊಡುಗೆ ನೀಡಬೇಕೆಂಬ ಅದಮ್ಯ ಆಸೆಯಿಂದ ಕೃಷಿ ಪದವಿ ಆಯ್ದುಕೊಂಡೆ. ನನ್ನ ಓದು ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ ಎಂಬುದಕ್ಕೆ ಚಿನ್ನದ ಪದಕವೇ ಸಾಕ್ಷಿ’ ಎಂದು ಬಿಎಸ್ಸಿ (ಕೃಷಿ)ಯಲ್ಲಿ 8 ಚಿನ್ನದ ಪದಕ ಹಾಗೂ 5 ಚಿನ್ನದ ಪ್ರಮಾಣಪತ್ರ ಪಡೆದ ಸಹನಾ ಭಟ್‌ ಖುಷಿ ಹಂಚಿಕೊಂಡರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 52ನೇ ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸಿ ಅವರು ಮಾತನಾಡಿದರು.

‘ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾದನೆ ಹಾಗೂ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸುವುದು ಸಮಸ್ಯೆಯಾಗಿದೆ. ಇದನ್ನು ಸವಾಲಾಗಿ ಸ್ವೀಕರಿಸಿ ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿ ಪರಿಹಾರ ನೀಡಲು ಪ್ರಯತ್ನಿಸುವೆ’ ಎಂದರು.

ADVERTISEMENT

‘ಆನುವಂಶೀಯ ಮತ್ತು ಸಸ್ಯತಳಿ ವಿಜ್ಞಾನದಲ್ಲಿ ಉನ್ನತ ವ್ಯಾಸಂಗ ಪೂರ್ಣಗೊಳಿಸಿ ತಳಿ ವಿಜ್ಞಾನಿ ಆಗುವ ಕನಸಿದೆ’ ಎಂದು ಹೇಳಿದರು.

‘ಚಿನ್ನದ ಪದಕ ಬಂದಿರುವುದಕ್ಕಿಂತ ಪೋಷಕರ ಕನಸನ್ನು ಈಡೇರಿಸಿದೆ ಎನ್ನುವ ಸಂತಸವೇ ಹೆಚ್ಚಿದೆ. ವಿಜಯಪುರದಲ್ಲಿ ಸಸ್ಯತಳಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿದ್ದೇನೆ. ಹೊಸ ತಳಿಗಳ ಅಭಿವೃದ್ಧಿ ನನ್ನ ಗುರಿಯಾಗಿದೆ’ ಎಂದು ಐದು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡ ಪದವಿ ವಿದ್ಯಾರ್ಥಿನಿ ಕೆ.ಪಿ.ಸೌರಭಾ ಕನಸನ್ನು ತೆರೆದಿಟ್ಟರು.

‘ಶಾಲೆಯಲ್ಲಿದ್ದಾಗ ವೈದ್ಯನಾಗಬೇಕೆಂದು ಕನಸು ಕಂಡಿದ್ದೆ. ಆದರೆ, ಊರಿನಲ್ಲಿನ ರೈತರ ಸಮಸ್ಯೆಗಳನ್ನು ನೋಡಿ ಅವರಿಗೆ ಏನಾದರೂ ಸಹಾಯ ಮಾಡಬೇಕೆಂದು ಕೃಷಿ ಪದವಿ ಓದುವ ನಿರ್ಧಾರ ಮಾಡಿದೆ. ಸಸ್ಯಗಳಿಗೆ ಬರುವ ರೋಗಗಳ ಅಧ್ಯಯನ ನನ್ನ ಆಸಕ್ತಿ ಕ್ಷೇತ್ರ’ ಎಂದು 7 ಚಿನ್ನದ ಪದಕ ಪಡೆದ ಸ್ನಾತಕೋತ್ತರ ವಿದ್ಯಾರ್ಥಿ ಎಂ.ಎಸ್‌. ಉದಯಕುಮಾರ್‌ ಹೇಳಿದರು.

ಜೈವಿಕ ತಂತ್ರಜ್ಞಾನ ಇಲಾಖೆಯ ನಿವೃತ್ತ ಕಾರ್ಯದರ್ಶಿ ಡಾ.ಮಂಜುಶರ್ಮ ಮಾತನಾಡಿ, ‘ಸುಸ್ಥಿರ ಕೃಷಿಯನ್ನು ಅಳವಡಿಸಿಕೊಂಡು ಆಹಾರೋತ್ಪನ್ನಗಳ ಇಳುವರಿಯನ್ನು ಹೆಚ್ಚಿಸಬೇಕಿದೆ. ಇದಕ್ಕಾಗಿ ಕೃಷಿತಂತ್ರಜ್ಞಾನಗಳು ರೈತರಿಗೆ ತಲುಪಬೇಕು’ ಎಂದು ತಿಳಿಸಿದರು.

967 ವಿದ್ಯಾರ್ಥಿಗಳಿಗೆ ಪದವಿ

631 ಮಂದಿಗೆ ಸ್ನಾತಕ ಪದವಿ, 272 ಮಂದಿಗೆ ಸ್ನಾತಕೋತ್ತರ ಪದವಿ ಹಾಗೂ 64 ಮಂದಿಗೆ ಪಿಎಚ್‌.ಡಿ ಪದವಿ ಪ್ರದಾನ ಮಾಡಲಾಯಿತು. 118 ಚಿನ್ನದ ಪದಕಗಳು ಮತ್ತು 18 ಚಿನ್ನದ ಲೇಪನವಿರುವ ಪದಕಗಳನ್ನು ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.