ADVERTISEMENT

‘ಮನೆ ಬಾಗಿಲಿಗೆ ಬ್ಯಾಂಕ್‌ ಸೌಲಭ್ಯ’

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2018, 19:30 IST
Last Updated 18 ಫೆಬ್ರುವರಿ 2018, 19:30 IST

ಬೆಂಗಳೂರು: ಬ್ಯಾಂಕ್‌ ಸೌಲಭ್ಯಗಳನ್ನು ಹಿರಿಯ ನಾಗರಿಕರು ಮತ್ತು ಅಂಗವಿಕಲರ ಮನೆಬಾಗಿಲಿಗೆ ತಲುಪಿಸುವಂತೆ ಅಧಿಕಾರಿಗಳಿಗೆ ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿ ಸಂಚಾಲಕ ಮಲ್ಲಿಕಾರ್ಜುನ ರಾವ್‌ ಸೂಚನೆ ನೀಡಿದ್ದಾರೆ.

ಬ್ಯಾಂಕರ್ಸ್‌ ಸಮಿತಿಯ ಸಭೆಯಲ್ಲಿ ಮಾತನಾಡಿದ ಸಿಂಡಿಕೇಟ್‌ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರೂ ಆಗಿರುವ ರಾವ್‌, ಬ್ಯಾಂಕ್‌ ಅಧಿಕಾರಿಗಳು ಪಿಂಚಣಿ ಪಡೆಯುವ ಹಿರಿಯ ನಾಗರಿಕರ ಮನೆಗೆ ತೆರಳಿ ಜೀವಿತ ಪ್ರಮಾಣ ಪತ್ರ ಪಡೆದುಕೊಳ್ಳಬೇಕು ಎಂದು ಸೂಚಿಸಿದರು.

ಈ ಬಗ್ಗೆ ಆರ್‌ಬಿಐ ಈಗಾಗಲೇ ಸ್ಪಷ್ಟ ಸೂಚನೆ ನೀಡಿದೆ. ಬ್ಯಾಂಕಿಗೆ ಬರುವ ಈ ವರ್ಗದ ಜನರಿಗೆ ಆದ್ಯತೆ ನೀಡುವಂತೆಯೂ ಸೂಚಿಸಿದೆ ಎಂದರು.

ADVERTISEMENT

‘ಎಲ್ಲ ವಾಣಿಜ್ಯ ಬ್ಯಾಂಕುಗಳು ಆಧಾರ್‌ ನೋಂದಣಿ ಕೇಂದ್ರಗಳನ್ನು ಆರಂಭಿಸುವಂತೆ ಆರ್ಥಿಕ ಸೇವೆಗಳ ಇಲಾಖೆ ನಿರ್ದೇಶನ ನೀಡಿದೆ.

‘ಪ್ರತಿ 10 ಬ್ಯಾಂಕು ಶಾಖೆಗಳ ಪೈಕಿ ಒಂದು ಶಾಖೆಯಲ್ಲಿ ಆಧಾರ್‌ ಅಪ್‌ಡೇಟ್‌ ಸೌಲಭ್ಯ ಒದಗಿಸಬೇಕು. ರಾಜ್ಯದಲ್ಲಿ 23 ವಾಣಿಜ್ಯ ಬ್ಯಾಂಕುಗಳು 653 ಕೇಂದ್ರಗಳನ್ನು ಆರಂಭಿಸಬೇಕಿದ್ದು, 18 ಬ್ಯಾಂಕುಗಳು ಈಗಾಗಲೇ 175 ಕೇಂದ್ರಗಳನ್ನು ಆರಂಭಿಸಿವೆ’ ಎಂದರು.

‘ವಸೂಲಾಗದ ಸಾಲ (ಎನ್‌ಪಿಎ) ಹೆಚ್ಚುತ್ತಿರುವ ಬಗ್ಗೆ ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಹೀಗಾಗಿ ಸಾಲ ವಸೂಲಿಗೆ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರ ಪ್ರಾಯೋಜಿತ ಯೋಜನೆಗಳ ಸಾಲ ಮರುಪಾವತಿಗೆ ವಿವಿಧ ಇಲಾಖೆಗಳು ಸಹಕಾರ ನೀಡಬೇಕು’ ಎಂದು   ವಿನಂತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.