ADVERTISEMENT

‘ಬಿಕ್ಕಟ್ಟಿನಲ್ಲಿರುವ ಪ್ರಜಾಪ್ರಭುತ್ವಕ್ಕೆ ಅಡಿಗರ ಚಿಂತನೆ ಬೇಕಿದೆ’

ಕಾರ್ಯಕ್ರಮದಲ್ಲಿ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2018, 19:43 IST
Last Updated 18 ಫೆಬ್ರುವರಿ 2018, 19:43 IST
ನಗರದಲ್ಲಿ ಭಾನುವಾರ 'ದಯಾನಂದ ಸಾಗರ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ' ಆಯೋಜಿಸಿದ್ದ "ಗೋಪಾಲಕೃಷ್ಣ ಅಡಿಗರ ಶತಮಾನ ಸಂಭ್ರಮ" ಕಾರ್ಯಕ್ರಮದಲ್ಲಿ ಕವಿ ಮತ್ತು 'ನ್ಯಾಷನಲ್ ಬುಕ್ ಟ್ರಸ್ಟ್'ನ ಮಾಜಿ ಅಧ್ಯಕ್ಷ ಡಾ. ಸುಮತೀಂದ್ರ ನಾಡಿಗ್ ಅವರು (ಮಧ್ಯದವರು) ಅಡಿಗರ ವರ್ಧಮಾನ ಪುಸ್ತಕ ಬಿಡುಗಡೆ ಮಾಡಿದರು .(ಎಡದಿಂದ) ಗಾಯಕ ವೈ.ಕೆ ಮುದ್ದುಕೃಷ್ಣ, ಗೋಪಾಲಕೃಷ್ಣ ಅಡಿಗರ ಮಗ ಪ್ರದ್ಯುಮ್ನ ಅಡಿಗ, ಕವಿ ಡಾ.ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟ ಮತ್ತು ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಮಣ್ಯ ಇದ್ದರು. -ಪ್ರಜಾವಾಣಿ ಚಿತ್ರ
ನಗರದಲ್ಲಿ ಭಾನುವಾರ 'ದಯಾನಂದ ಸಾಗರ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ' ಆಯೋಜಿಸಿದ್ದ "ಗೋಪಾಲಕೃಷ್ಣ ಅಡಿಗರ ಶತಮಾನ ಸಂಭ್ರಮ" ಕಾರ್ಯಕ್ರಮದಲ್ಲಿ ಕವಿ ಮತ್ತು 'ನ್ಯಾಷನಲ್ ಬುಕ್ ಟ್ರಸ್ಟ್'ನ ಮಾಜಿ ಅಧ್ಯಕ್ಷ ಡಾ. ಸುಮತೀಂದ್ರ ನಾಡಿಗ್ ಅವರು (ಮಧ್ಯದವರು) ಅಡಿಗರ ವರ್ಧಮಾನ ಪುಸ್ತಕ ಬಿಡುಗಡೆ ಮಾಡಿದರು .(ಎಡದಿಂದ) ಗಾಯಕ ವೈ.ಕೆ ಮುದ್ದುಕೃಷ್ಣ, ಗೋಪಾಲಕೃಷ್ಣ ಅಡಿಗರ ಮಗ ಪ್ರದ್ಯುಮ್ನ ಅಡಿಗ, ಕವಿ ಡಾ.ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟ ಮತ್ತು ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಮಣ್ಯ ಇದ್ದರು. -ಪ್ರಜಾವಾಣಿ ಚಿತ್ರ   

ಬೆಂಗಳೂರು: ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿದೆ. ರಾಜಕೀಯ ಪ್ರಜ್ಞೆ ಹೊಂದಿದ್ದ ಕವಿ ಗೋಪಾಲಕೃಷ್ಣ ಅಡಿಗರ ಚಿಂತನೆಗಳು ಇಂತಹ ಸಂದರ್ಭದಲ್ಲಿ ಬಹಳ ಮುಖ್ಯವೆನಿಸುತ್ತವೆ ಎಂದು ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.

ದಯಾನಂದ ಸಾಗರ ಕಾಲೇಜು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಗೋಪಾಲಕೃಷ್ಣ ಅಡಿಗರ ಜನ್ಮಶತಮಾನೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಂದು ತಲೆಮಾರಿನ ಜನರಿಗೆ ನೈತಿಕ ಮೌಲ್ಯಗಳನ್ನು ಕಲಿಸಿಕೊಟ್ಟ ಅಡಿಗರು, ಅವುಗಳನ್ನು ತಮ್ಮ ಬದುಕಿನುದ್ದಕ್ಕೂ ಪಾಲಿಸಿದರು. ಸಾಕಷ್ಟು ಜನರನ್ನು ಬೆಳೆಸಿದರು. ಆದರೆ, ಅವರಿಂದಾಗಿ ಬೆಳೆದ ಅನೇಕರು ಅಡಿಗರನ್ನೇ ಮರೆತುಬಿಟ್ಟರು ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಅಡಿಗರ ಕವನಗಳಲ್ಲಿನ ಬೆಚ್ಚಿ ಬೀಳಿಸುವ ಸಾಲುಗಳು ಮಡಿವಂತ ಸಾಹಿತಿಗಳಿಗೆ ಇಷ್ಟವಾಗುತ್ತಿರಲಿಲ್ಲ. ಅವರು ಅಶ್ಲೀಲ ಪದ್ಯ ಬರೆಯುತ್ತಿದ್ದಾರೆ ಎಂದೂ ಕೆಲವರು ಆರೋಪಿಸಿದ್ದರು. ಆಗಿನ ಮುಖ್ಯಮಂತ್ರಿಗೂ ಈ ಬಗ್ಗೆ ಪತ್ರ ಬರೆದು ದೂರಿದ್ದರು. ತಮ್ಮನ್ನು  ಭೇಟಿಯಾಗುವಂತೆ ಸೂಚಿಸಿ ಅಡಿಗರಿಗೆ ಮುಖ್ಯಮಂತ್ರಿ ಪತ್ರ ಬರೆದಿದ್ದರು. ಇದಕ್ಕೆ ಅಡಿಗರೂ ಸ್ವಾಭಿಮಾನದಿಂದ ಉತ್ತರಿಸಿದ್ದರು. ತಾವು ಹೇಳಿದ ಸಮಯಕ್ಕೆ ನಿಮ್ಮಲ್ಲಿಗೆ ಬರಲು ಸಾಧ್ಯವಿಲ್ಲ. ನಮ್ಮಿಬ್ಬರಿಗೂ ಸಮಯ ಸಿಕ್ಕಾಗ ಭೇಟಿಯಾಗೋಣ ಎಂದು ತಿಳಿಸಿದ್ದರು’ ಎಂದು ಹಳೇ ಪ್ರಸಂಗವೊಂದನ್ನು ನೆನಪಿಸಿಕೊಳ್ಳುವ ಮೂಲಕ ಕವಿಯ ವ್ಯಕ್ತಿತ್ವ ದರ್ಶನ ಮಾಡಿಸಿದರು.

‘ಈಗಿನ ಸಾಹಿತಿಗಳು ರಾಜಕಾರಣಿಗಳ ಹಿಂದೆ, ಮುಂದೆಯೇ ಸುತ್ತಾಡುತ್ತಿರುತ್ತಾರೆ. ಸ್ವಾಯತ್ತ ಮನೋಭಾವವನ್ನೇ ಕಳೆದುಕೊಂಡಿದ್ದಾರೆ. ಪ್ರಭುತ್ವದ ವಿರುದ್ಧ ಮಾತನಾಡುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ’ ಎಂದು ಟೀಕಿಸಿದರು.

ನವ್ಯಕವಿಯ ಕಾವ್ಯಶಕ್ತಿಯ ಕುರಿತು ವಿವರಿಸಿದ ಸಾಹಿತಿ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ‘ಒಳ ಮನಸ್ಸಿನ ಅನುಭವ ಹೇಳಲು ಅವರು ಪ್ರತಿಮೆಗಳನ್ನು ಸೃಷ್ಟಿಸುತ್ತಿದ್ದರು. ಹೀಗಾಗಿ ಅವರ ಕಾವ್ಯದ ಪ್ರತಿಮೆಗಳ ವ್ಯಾಪ್ತಿ ವಿಸ್ತಾರವಾದುದು. ಅವರ ಒಂದೊಂದು ಸಾಲೂ ಒಂದೊಂದು ಪ್ರತಿಮೆ. ಆ ಪ್ರತಿಮೆಗಳನ್ನು ಅರ್ಥ ಮಾಡಿಕೊಳ್ಳಲು ಭಾಷಾಜ್ಞಾನ ಬೇಕು’ ಎಂದರು.

ಹೊಗೆ, ಬೆಂಕಿ,

ಅಯ್ಯೋ.. ಹಾಳಾಗ!

ಉರಿ, ಸೆಕೆ, ತಾಪ,

ಹೊರಗೆ ರಣ ರಣ ಬಿಸಿಲು

ಒಳಗೆ ಮಾರಣ ಬೆಂಕಿ

ಮಲಗಿತ್ತು ಮನ ಚಿತೆಯ ಮೇಲೆ ಆಫೀಸಿನಲಿ... ಎಂಬ ‘ಹಿಮಗಿರಿಯ ಕಂದರ’ ಕವನದ ಈ ಸಾಲುಗಳು ಅವರ ಕಾವ್ಯಶಕ್ತಿಯನ್ನು ತೋರಿಸುತ್ತದೆ. ನವೋದಯದಿಂದ ಕಳಚಿಕೊಂಡ ಬಳಿಕ ಅಡಿಗರು ‘ಚಂಡೆಮದ್ದಳೆ’ ಕವನ ಸಂಕಲನದ ಮೂಲಕ ನವ್ಯ ಲೋಕಕ್ಕೆ ಕಾಲಿಟ್ಟರು. ಸೂಕ್ಷ್ಮವಾದ, ಆಳವಾದ ವಿಷಯವನ್ನು ಒಳಗೊಂಡ ಸಾಲುಗಳನ್ನು ಅವರ ಕವನದಲ್ಲಿ ಕಾಣಬಹುದು ಎಂದು ವಿವರಿಸಿದರು.

ಸಾಹಿತಿ ಸುಮತೀಂದ್ರ ನಾಡಿಗ, ‘ಗಂಡಸುತನದ ಕಾವ್ಯವನ್ನು ಅವರು ಬರೆದರು. ಅವರ ನವ್ಯಕಾವ್ಯ ಮೊದಮೊದಲು ಜನರಿಗೆ ಅರ್ಥವಾಗಲಿಲ್ಲ. ಆದರೆ, ಅವರು ಜೀವನಕ್ಕೆ ಹತ್ತಿರವಾದ ವಿಷಯಗಳನ್ನು ಕಾವ್ಯದಲ್ಲಿ ಹೇಳಿದ್ದಾರೆ’ ಎಂದರು.

ಪದವಿ ಕಾಲೇಜುಗಳಿಗೆ ಅಡಿಗರ ಪುಸ್ತಕ ಹಂಚಿಕೆ

ಮರುಮುದ್ರಣಗೊಂಡಿರುವ ‘ವರ್ಧಮಾನ’ ಕವನ ಸಂಕಲನವನ್ನು ಬಿಡುಗಡೆ ಮಾಡಲಾಯಿತು.

‘ಅಡಿಗರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಹೊಸ ತಲೆಮಾರಿನವರಿಗೆ ಅವರನ್ನು ಪರಿಚಯಿಸುವ ಉದ್ದೇಶ ಹೊಂದಿದ್ದೇವೆ. ಅಡಿಗರ ಸಮಗ್ರ ಸಾಹಿತ್ಯವನ್ನು ಈ ವರ್ಷದೊಳಗೆ ಪ್ರಕಟಿಸುವ ಯೋಜನೆ ಇದೆ. ಅದನ್ನು ರಾಜ್ಯದ ಎಲ್ಲಾ ಪದವಿ ಕಾಲೇಜುಗಳಿಗೆ ಉಚಿತವಾಗಿ ನೀಡುತ್ತೇವೆ’ ಎಂದು ನರಹಳ್ಳಿ ಬಾಲಸುಬ್ರಹ್ಮಣ್ಯ ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.