ADVERTISEMENT

ಗೋದಾಮಿಗೆ ಬೆಂಕಿ: ಇಬ್ಬರು ಕಾರ್ಮಿಕರು ಸಜೀವ ದಹನ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 19:30 IST
Last Updated 20 ಫೆಬ್ರುವರಿ 2018, 19:30 IST

ಬೆಂಗಳೂರು: ಚಂದ್ರಾಲೇಔಟ್‌ ಬಳಿಯಸುವರ್ಣ ಲೇಔಟ್‌ನಲ್ಲಿ ಸಿದ್ಧ ಉಡುಪಿನ ತ್ಯಾಜ್ಯ ಬಟ್ಟೆ ಸಂಗ್ರಹಿಸಿಟ್ಟಿದ್ದ ಗೋದಾಮಿನಲ್ಲಿ ಸೋಮವಾರ ರಾತ್ರಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.

ಮೈಸೂರಿನ ಮೇಲೂರು ಗ್ರಾಮದ ಮಂಜು (27) ಹಾಗೂ ಇನ್ನೊಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಕೆಲಸ ಹುಡುಕಿಕೊಂಡು ಮಂಜು ನಗರಕ್ಕೆ ಬಂದಿದ್ದರು.

ವೆಂಕಟಪ್ಪ ಎಂಬುವರ ಖಾಲಿ ನಿವೇಶನವನ್ನು ಬಾಡಿಗೆಗೆ ಪಡೆದಿದ್ದ ಶಾಮಣ್ಣ ಗಾರ್ಡನ್‌ನ ಯಾಸೀರ್, ಅಲ್ಲಿ ಗೋದಾಮು ನಿರ್ಮಿಸಿದ್ದರು. ಯೋಗೇಶ್, ಮಂಜು ಹಾಗೂ ಇನ್ನೊಬ್ಬ ವ್ಯಕ್ತಿ ತ್ಯಾಜ್ಯ ಬಟ್ಟೆಗಳನ್ನು ಬೇರ್ಪಡಿಸುವ ಕೆಲಸಕ್ಕೆ ಸೇರಿಕೊಂಡಿದ್ದರು.

ADVERTISEMENT

‘ಕಡಿಮೆ ಸಂಬಳ ಪಡೆದು ಕೆಲಸ ಮಾಡುತ್ತಿದ್ದ ಕಾರಣಕ್ಕೆ ಕಾರ್ಮಿಕರು ನಗರದಲ್ಲಿ ಬಾಡಿಗೆ ಮನೆ ಮಾಡಿರಲಿಲ್ಲ. ಹೀಗಾಗಿ, ಗೋದಾಮಿನಲ್ಲೇ ವಾಸವಿದ್ದರು. ಸೋಮವಾರ
ರಾತ್ರಿ 11.30ರ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಕೆನ್ನಾಲಗೆ ಕ್ಷಣಾರ್ಧದಲ್ಲಿ ಗೋದಾಮನ್ನು ಪೂರ್ತಿ ಆವರಿಸಿ, ನಿದ್ರೆ ಮಾಡುತ್ತಿದ್ದ ಕಾರ್ಮಿಕರು ಸಜೀವವಾಗಿ ದಹನವಾಗಿದ್ದಾರೆ’ ಎಂದು ಚಂದ್ರಾಲೇಔಟ್ ಪೊಲೀಸರು ತಿಳಿಸಿದರು.

‘ಅಕ್ಕಪಕ್ಕದ ನಿವಾಸಿಗಳು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಮೂರು ವಾಹನಗಳಲ್ಲಿ ಸ್ಥಳಕ್ಕೆ ಬಂದ ಸಿಬ್ಬಂದಿ ರಾತ್ರಿಯೇ ಬೆಂಕಿ ನಂದಿಸಿದ್ದರು’ ಎಂದು ಹೇಳಿದರು.

‘ಗೋದಾಮಿನಲ್ಲಿ ರಾತ್ರಿ ಕಾರ್ಮಿಕರು ಮಲಗಿದ್ದರು ಎಂಬ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಘಟನಾ ಸ್ಥಳದಲ್ಲಿ ಬೆಳಿಗ್ಗೆ ಹೆಚ್ಚು ಹೊಗೆ ಇತ್ತು. ಹೀಗಾಗಿ, ಸುಟ್ಟುಕರಕಲಾದ ಬಟ್ಟೆಗಳಿಗೆ ಮಂಜುನಾಥ್ ನೀರು ಹಾಕುತ್ತಿದ್ದರು. ಆಗ ಮೃತದೇಹಗಳು ಪತ್ತೆಯಾಗಿದ್ದವು. ನಾಪತ್ತೆಯಾದ ಯೋಗೇಶ್ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ’ ಎಂದು ಅವರು ಹೇಳಿದರು.

‘ಬೆಂಕಿಯಿಂದ ತನ್ನ ಮನೆಗೆ ಹಾನಿಯಾಗಿದ್ದರಿಂದ ವೆಂಕಟಪ್ಪ ಹಾಗೂ ನಾಸೀರ್ ವಿರುದ್ಧ ಮಂಜುನಾಥ್ ದೂರು ಕೊಟ್ಟಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304ಎ (ನಿರ್ಲಕ್ಷ್ಯದಿಂದ ಸಾವು) ಅಡಿ ಪ್ರಕರಣ ದಾಖಲಿಸಿದ್ದೇವೆ. ತಲೆಮರೆಸಿಕೊಂಡ ಆರೋಪಿಗಳಿಗಾಗಿ ಹಾಗೂ ಯೋಗೇಶ್‌ಗಾಗಿ ಹುಡುಕಾಟ ನಡೆಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.