ADVERTISEMENT

ಮಲ ಹೊರುವವರ ಮರು ಸಮೀಕ್ಷೆಗೆ ಸೂಚನೆ

ರಾಜ್ಯದ ಎಂಟು ಜಿಲ್ಲೆಗಳಲ್ಲಿ ಸಮೀಕ್ಷೆ: ಜಗದೀಶ್‌ ಹಿರೇಮನಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2018, 19:30 IST
Last Updated 21 ಫೆಬ್ರುವರಿ 2018, 19:30 IST
ಮಲ ಹೊರುವವರ ಮರು ಸಮೀಕ್ಷೆಗೆ ಸೂಚನೆ
ಮಲ ಹೊರುವವರ ಮರು ಸಮೀಕ್ಷೆಗೆ ಸೂಚನೆ   

ಬೆಂಗಳೂರು: ರಾಜ್ಯದ ಎಂಟು ಜಿಲ್ಲೆಗಳಲ್ಲಿರುವ ಮಲ ಹೊರುವವರ ಕುರಿತು ಮರು ಸಮೀಕ್ಷೆ ನಡೆಸುವಂತೆ ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಲಾಗಿದೆ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಜಗದೀಶ್‌ ಹಿರೇಮನಿ ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯ ಪೌರಕಾರ್ಮಿಕರಿಗೆ ನೀಡುತ್ತಿರುವ ಸೌಲಭ್ಯಗಳ ಅನುಷ್ಠಾನ ಕುರಿತು ಅಧಿಕಾರಿಗಳು ಹಾಗೂ ಸಂಘ–ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಬುಧವಾರ ಸಭೆ ನಡೆಸಿದ ಬಳಿಕ ಮಾತನಾಡಿದರು.

ರಾಜ್ಯದಲ್ಲಿ ಮಲ ಹೊರುವವರು ಒಬ್ಬರೂ ಇಲ್ಲ ಎಂದು ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ. ಆದರೆ, ರಾಜ್ಯದಲ್ಲಿ ಮಲಹೊರುವ ಪದ್ಧತಿ ಜೀವಂತವಾಗಿದೆ. ಬೆಂಗಳೂರಿನಲ್ಲಿ ಈ ವರ್ಷದಲ್ಲೇ ಕೊಳಚೆ ನೀರು ಶುದ್ಧೀಕರಣ ಘಟಕಗಳನ್ನು (ಎಸ್‌ಟಿಪಿ) ಸ್ವಚ್ಛಗೊಳಿಸುವ ವೇಳೆ ಐವರು ಮೃತಪಟ್ಟಿದ್ದಾರೆ. ಇಂತಹ ಘಟನೆಗಳು ರಾಜ್ಯದಲ್ಲಿ ಸಾಕಷ್ಟು ನಡೆದಿವೆ. ಹೀಗಾಗಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಮೈಸೂರು, ಚಿತ್ರದುರ್ಗ, ದಾವಣಗೆರೆ, ಕಲಬುರ್ಗಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಮರು ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದರು.

ADVERTISEMENT

ಈ ಪದ್ಧತಿಯನ್ನು ನಿರ್ಮೂಲನೆ ಮಾಡುವಂತೆ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡಿನ ಸರ್ಕಾರಗಳಿಗೂ ನಿರ್ದೇಶನ ನೀಡಲಾಗಿದೆ. ತಂಬಾಕು ಸೇವನೆಯಿಂದ ಸಾವು ಸಂಭವಿಸುತ್ತದೆ ಎಂದು ಜಾಗೃತಿ ಮೂಡಿಸುವ ರೀತಿಯಲ್ಲೇ ಎಸ್‌ಟಿಪಿ, ಸಂಪ್‌ ಹಾಗೂ ತ್ಯಾಜ್ಯ ಗುಂಡಿಗಳಿಗೆ ಇಳಿಯುವುದರಿಂದ ಸಾವು ಸಂಭವಿಸುತ್ತದೆ ಎಂಬುದನ್ನು ಸಫಾಯಿ ಕರ್ಮಚಾರಿಗಳು ಹಾಗೂ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕು. ಎಸ್‌ಟಿಪಿಗಳ ಬಳಿ ಈ ಬಗ್ಗೆ ಎಚ್ಚರಿಕೆ ಫಲಕಗಳನ್ನೂ ಅಳವಡಿಸಬೇಕು ಎಂದು ಪಾಲಿಕೆಗೆ ಸೂಚಿಸಿದರು.

ನಗರದ ಕುಂದನಹಳ್ಳಿ ಎಇಸಿಎಸ್‌ ಬಡಾವಣೆಯ ‘ಯುಮ್‌ಲೋಕ್‌’ನಲ್ಲಿ ಹೋಟೆಲ್‌ನ ನೀರಿನ ಸಂಪ್‌ ಸ್ವಚ್ಛಗೊಳಿಸಲು ಇಳಿದಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟ ಪ್ರಕರಣ ಹೋಟೆಲ್‌ ಮತ್ತು ಕಟ್ಟಡದ ಮಾಲೀಕರು, ಇಬ್ಬರು ವ್ಯವಸ್ಥಾಪಕರು ಹಾಗೂ ಪಾಲಿಕೆಯ ಇಬ್ಬರು ಅಧಿಕಾರಿಗಳ ವಿರುದ್ಧ ಜಾಮೀನುರಹಿತ ಪ್ರಕರಣ ದಾಖಲಿಸಲಾಗಿದೆ. ಇದು ರಾಜ್ಯದಲ್ಲೇ ಮೊದಲ ಪ್ರಕರಣ ಎಂದರು.

ಆಯೋಗದ ಅಧ್ಯಕ್ಷ ಮನಹರ್‌ ವಾಲ್ಜಿಭಾಯಿ ಜಾಲಾ, ‘1993ರಿಂದ 2018ರವರೆಗೆ ಎಷ್ಟು ಮಂದಿ ಸಫಾಯಿ ಕರ್ಮಚಾರಿಗಳು ಮೃತಪಟ್ಟಿದ್ದಾರೆ, ಎಷ್ಟು ಮಂದಿಗೆ ₹10 ಲಕ್ಷ ಪರಿಹಾರ ನೀಡಲಾಗಿದೆ ಎಂಬ ವರದಿ ನೀಡಬೇಕು. ಎಸ್‌ಟಿಪಿ ಅಥವಾ ಮ್ಯಾನ್‌ಹೋಲ್‌ಗಳಿಗೆ ಮನುಷ್ಯರನ್ನು ಇಳಿಸಬಾರದು. ಯಂತ್ರಗಳನ್ನು ಬಳಸಿಯೇ ಸ್ವಚ್ಘಗೊಳಿಸಬೇಕು. ಒಂದು ವೇಳೆ ಮನುಷ್ಯರನ್ನು ಬಳಸಬೇಕಾದರೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

ಎಸ್‌ಟಿಪಿ, ಸಂಪ್‌, ಮ್ಯಾನ್‌ಹೋಲ್‌ಗಳನ್ನು ಸ್ವಚ್ಛಗೊಳಿಸಲು ಮನುಷ್ಯರನ್ನು ಬಳಕೆ ಮಾಡಿಕೊಂಡರೆ ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಮಾಲೀಕರ ವಿರುದ್ಧ ಜಾಮೀನುರಹಿತ ಪ್ರಕರಣ ದಾಖಲಿಸಬೇಕು ಎಂದು ಸೂಚಿಸಿದರು.

ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ‘ಪಾಲಿಕೆ ವ್ಯಾಪ್ತಿಯಲ್ಲಿರುವ ಪೌರಕಾರ್ಮಿಕರಿಗೆ ಈ ತಿಂಗಳಿಂದ ವೇತನ ನೇರ ಪಾವತಿ ಮಾಡಲಾಗುತ್ತದೆ. ಐದು ವಲಯಗಳ ಪೌರಕಾರ್ಮಿಕರ ಹೆಸರು, ಬ್ಯಾಂಕ್‌ ಖಾತೆ ವಿವರಗಳನ್ನು ಅಧಿಕಾರಿಗಳು ನೀಡಿದ್ದಾರೆ. ಇನ್ನೂ ಮೂರು ವಲಯಗಳ ಮಾಹಿತಿಯನ್ನು ಒಂದು ವಾರದಲ್ಲಿ ನೀಡಲಿದ್ದಾರೆ’ ಎಂದರು.

ಜಾಗ ನೀಡುವಂತೆ ನಿವಾಸಿಗಳ ಒತ್ತಾಯ

ವಿಮಾನ ನಿಲ್ದಾಣ ರಸ್ತೆಯ ಕೋಡಿಹಳ್ಳಿಯ ಪಾಲಿಕೆಯ ಕ್ವಾಟ್ರರ್ಸ್‌ ತೆರವುಗೊಳಿಸಿ 18 ವರ್ಷಗಳು ಕಳೆದಿವೆ. ಈವರೆಗೂ ಮನೆ ನೀಡಿಲ್ಲ ಎಂದು ಅಲ್ಲಿನ ಸಂತ್ರಸ್ತರು ಆಯೋಗದ ಅಧ್ಯಕ್ಷರ ಬಳಿ ಅಳಲು ತೋಡಿಕೊಂಡರು.

ಪಾಲಿಕೆಯ ಕ್ವಾಟ್ರರ್ಸ್‌ನ ಮನೆಗಳನ್ನು 1982ರಲ್ಲಿ ಹಂಚಲಾಗಿತ್ತು. ಆದರೆ, ಅದು ಹಾಳಾಗಿದ್ದರಿಂದ 2000ರಲ್ಲಿ ತೆರವುಗೊಳಿಸಲಾಗಿತ್ತು. ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡುವುದಾಗಿ ಪಾಲಿಕೆ ಅಧಿಕಾರಿಗಳು ಹೇಳಿದ್ದರು. ಆದರೆ, ಅದು ಈವರೆಗೂ ಈಡೇರಿಲ್ಲ. ಇದರಿಂದ 149 ಮಂದಿ ಬೀದಿಗೆ ಬಿದ್ದಿದ್ದಾರೆ. ಮನೆ ಬದಲಿಗೆ ಜಾಗ ಕೊಡಬೇಕು ಎಂದು ಜಯಮ್ಮ ಒತ್ತಾಯಿಸಿದರು.

ಸಭೆಯಲ್ಲಿ ಕೇಳಿಬಂದ ಬೇಡಿಕೆಗಳು

* ಪೌರಕಾರ್ಮಿಕರಿಗೆ ಆರೋಗ್ಯ ಕಾರ್ಡ್‌ ನೀಡಬೇಕು

* ಪೌರಕಾರ್ಮಿಕರಿಗೆ ಶೌಚಾಲಯಗಳನ್ನು ಕಟ್ಟಿಸಿಕೊಡಬೇಕು

* ಪಿಂಚಣಿ, ಗ್ರ್ಯಾಚುಟಿ ನೀಡಬೇಕು

* ಶೌಚಾಲಯಗಳ ನಿರ್ವಹಣೆಯನ್ನು ಪೌರಕಾರ್ಮಿಕರಿಗೆ ವಹಿಸಿಕೊಡಬೇಕು

***

ಗುತ್ತಿಗೆದಾರರು, ಮಾಲೀಕರ ವಿರುದ್ಧ ದೂರು ದಾಖಲಿಸಿಕೊಳ್ಳದಿದ್ದರೆ ಸಂಬಂಧಪಟ್ಟ ಠಾಣೆಯ ಹಿರಿಯ ಪೊಲೀಸ್‌ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸುತ್ತೇವೆ.
–ಜಗದೀಶ್‌ ಹಿರೇಮನಿ, ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ

***

ಮ್ಯಾನ್‌ಹೋಲ್‌ಗೆ ಕಾರ್ಮಿಕರನ್ನು ಇಳಿಸಿದ್ದ ಗುತ್ತಿಗೆದಾರರ ವಿರುದ್ಧ 2016ರಲ್ಲಿ ಕಬ್ಬನ್‌ ಪಾರ್ಕ್‌ ಠಾಣೆಗೆ ದೂರು ನೀಡಿದ್ದೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ.
–ನರಸಿಂಹಮೂರ್ತಿ, ಮಾನವ ಹಕ್ಕುಗಳ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.