ADVERTISEMENT

64 ವಾರ್ಡ್‌ಗಳಲ್ಲಿ ಶೌಚಾಲಯವೇ ಇಲ್ಲ!

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2017, 19:41 IST
Last Updated 3 ಡಿಸೆಂಬರ್ 2017, 19:41 IST
64 ವಾರ್ಡ್‌ಗಳಲ್ಲಿ ಶೌಚಾಲಯವೇ ಇಲ್ಲ!
64 ವಾರ್ಡ್‌ಗಳಲ್ಲಿ ಶೌಚಾಲಯವೇ ಇಲ್ಲ!   

ಬೆಂಗಳೂರು: ಪಾಲಿಕೆ ವ್ಯಾಪ್ತಿಯ 64 ವಾರ್ಡ್‌ಗಳಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲ. ಇಂತಹ 42 ವಾರ್ಡ್‌ಗಳು ನಗರದ ಕೇಂದ್ರ ಭಾಗದಲ್ಲೇ ಇವೆ.

‘ಜನಾಗ್ರಹ’ ಸಂಸ್ಥೆಯು ಶೌಚಾಲಯಗಳ ಬಗ್ಗೆ ನಡೆಸಿರುವ ಸಮೀಕ್ಷೆಯಲ್ಲಿ ಈ ಅಂಶ ತಿಳಿದುಬಂದಿದೆ.

ಸಮೀಕ್ಷೆ ಕುರಿತು ಮಾಹಿತಿ ನೀಡಿದ ಸಂಸ್ಥೆಯ ನಾಗರಿಕ ಸಹಭಾಗಿತ್ವ ವಿಭಾಗದ ಮುಖ್ಯಸ್ಥೆ ಸಪ್ನಾ ಕರೀಂ, ‘ಸ್ವಚ್ಛ ಭಾರತ ಅಭಿಯಾನದ ಮಾರ್ಗಸೂಚಿ ಪ್ರಕಾರ 100 ಪುರುಷರಿಗೆ ತಲಾ 1 ಮತ್ತು 100 ಮಹಿಳೆಯರಿಗೆ ತಲಾ 2 ಶೌಚಾಲಯಗಳು ಇರಬೇಕು. ನಗರದ ಬೀದಿಗಳ ಉದ್ದ ಪರಿಗಣಿಸಿದಾಗ 7 ಕಿ.ಮೀ.ಗೆ ಒಂದು ಶೌಚಾಲಯ ಇರಬೇಕು. ಆದರೆ, ಪ್ರತಿ 24 ಕಿ.ಮೀ.ಗೆ ಒಂದು ಶೌಚಾಲಯವಿದೆ. ಸುಮಾರು 1,100 ಶೌಚಾಲಯಗಳ ಕೊರತೆ ಇದೆ’ ಎಂದರು.

ADVERTISEMENT

‘ಶೇ 85ರಷ್ಟು ಶೌಚಾಲಯಗಳು ನಗರದ ಕೇಂದ್ರ ಭಾಗದ ವಾರ್ಡ್‌ಗಳಲ್ಲೇ ಇವೆ. ಹೊರವಲಯದ ವಾರ್ಡ್‌ಗಳಲ್ಲಿ ಅತ್ಯಂತ ಕಡಿಮೆ ಇವೆ. 11 ಪ್ರಮುಖ ಬಸ್ ಡಿಪೊಗಳಲ್ಲಿ ಯಾವುದೇ ಶೌಚಾಲಯಗಳಿಲ್ಲ’ ಎಂದು ತಿಳಿಸಿದರು.

‘ಪಾಲಿಕೆಯು 2016-17ನೇ ಸಾಲಿನಲ್ಲಿ ಸಾರ್ವಜನಿಕ ಶೌಚಾಲಯಗಳಿಗಾಗಿ ₹5 ಕೋಟಿಗೂ ಅಧಿಕ ಹಣ ಖರ್ಚು ಮಾಡಿದೆ. ಸ್ವಚ್ಛ ಭಾರತ ಮಿಷನ್‌ನ ಮಾರ್ಗಸೂಚಿಗಳನ್ನು ಪೂರೈಸಬೇಕಾದರೆ ಪಾಲಿಕೆಯು ಹೊಸ ಶೌಚಾಲಯಗಳ ನಿರ್ಮಾಣಕ್ಕೆ ಹೆಚ್ಚುವರಿಯಾಗಿ ₹51 ಕೋಟಿ ವೆಚ್ಚ ಮಾಡಬೇಕಿದೆ. 2017-18ರ ಬಜೆಟ್‌ನಲ್ಲಿ ಶೌಚಾಲಯಗಳಿಗಾಗಿ ₹51 ಕೋಟಿ ಮೀಸಲಿಟ್ಟಿರುವುದು ಒಳ್ಳೆಯ ಬೆಳವಣಿಗೆ.

ಈ ವರ್ಷ ₹3.8 ಕೋಟಿ ಮೊತ್ತದ ಕಾಮಗಾರಿಗಳಿಗೆ ಜಾಬ್ ಕೋಡ್‍ ನೀಡಲಾಗಿದೆ. ₹9.2 ಕೋಟಿ ಮೊತ್ತದ ಕಾಮಗಾರಿಗಳಿಗೆ 80 ಟೆಂಡರ್‍ಗಳನ್ನು ನೀಡಲಾಗಿದೆ. ಇದು ಸಕಾರಾತ್ಮಕ ಹೆಜ್ಜೆಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸುಧಾಮನಗರ ವಾರ್ಡ್‌ನಲ್ಲಿ 28 ಶೌಚಾಲಯ

‘ನಗರ ಕೇಂದ್ರ ಭಾಗದ 43 ವಾರ್ಡ್‍ಗಳಲ್ಲಿ ಶೌಚಾಲಯಗಳ ನಿರ್ವಹಣೆ ಉತ್ತಮವಾಗಿವೆ. ಸುಧಾಮನಗರ ವಾರ್ಡ್‌ನಲ್ಲಿ 28 ಶೌಚಾಲಯಗಳಿದ್ದು, ಅತ್ಯುತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ಎರಡನೇ ಸ್ಥಾನದಲ್ಲಿ ಧರ್ಮರಾಯಸ್ವಾಮಿ ದೇವಾಲಯ ವಾರ್ಡ್‌ ಇದ್ದು, ಇಲ್ಲಿ 22 ಶೌಚಾಲಯಗಳಿವೆ’ ಎಂದು ಸಪ್ನಾ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.