ADVERTISEMENT

₹ 6.44 ಕೋಟಿ ವಂಚಿಸಿದ್ದವನ ಸೆರೆ

ಎನ್‌ಆರ್‌ಐಗಳಿಗೆ ಭಾರಿ ಮೋಸ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST

ಬೆಂಗಳೂರು: ‘ನನಗೆ ಗೊತ್ತಿರುವ ಕಂಪನಿಗಳಲ್ಲಿ ನೀವು ಹಣ ಹೂಡಿದರೆ ಹೆಚ್ಚಿನ ಲಾಭಾಂಶ ಕೊಡಿಸುತ್ತೇನೆ’ ಎಂದು ನಂಬಿಸಿ, ಅನಿವಾಸಿ ಭಾರತೀಯರೊಬ್ಬರಿಗೆ ₹ 6.44 ಕೋಟಿ ವಂಚಿಸಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಡಿ.ಎಸ್.ಗಣೇಶ್ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ವಂಚನೆಗೆ ಒಳಗಾದ ರಾಜೇಶ್ ರಾಮಚಂದ್ರನ್ (59), ಫೆ.15ರಂದು ಮಲ್ಲೇಶ್ವರ ಠಾಣೆಗೆ ದೂರು ಕೊಟ್ಟಿದ್ದರು. ವಂಚನೆಯ ಮೊತ್ತ ಹೆಚ್ಚಿದ್ದ ಕಾರಣ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು.

ಮಲ್ಲೇಶ್ವರ 15ನೇ ಅಡ್ಡರಸ್ತೆಯಲ್ಲಿರುವ ಗಣೇಶ್‌ ಮನೆ ಮೇಲೆ ಶನಿವಾರ ಬೆಳಿಗ್ಗೆ ದಾಳಿ ನಡೆಸಿದ ಸಿಸಿಬಿ ಇನ್‌ಸ್ಪೆಕ್ಟರ್ ಪ್ರಕಾಶ್ ರಾಥೋಡ್ ನೇತೃತ್ವದ ತಂಡ, ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದೆ. ಹಾಗೆಯೇ ಲ್ಯಾಪ್‌ಟಾಪ್, ಮೊಬೈಲ್‌ಗಳು ಹಾಗೂ ವ್ಯವಹಾರಕ್ಕೆ ಸಂಬಂಧಿಸಿದ ಕೆಲ ಕಡತಗಳನ್ನೂ ಜಪ್ತಿ ಮಾಡಿದೆ.

ADVERTISEMENT

‘ಆರೋಪಿಯು ರಾಜೇಶ್ ರಾಮಚಂದ್ರನ್ ಅವರಿಗೆ ಮಾತ್ರವಲ್ಲದೆ, ಹೊಸಪೇಟೆಯ ನಿವೃತ್ತ ಅಧಿಕಾರಿಯೊಬ್ಬರಿಗೂ ಇದೇ ರೀತಿ ₹ 8 ಕೋಟಿ ವಂಚಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ, ಹೆಚ್ಚಿನ ವಿಚಾರಣೆಗಾಗಿ ಐದು ದಿನ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದೇವೆ. ವಂಚನೆ ಸಂಬಂಧ ಆತನ ಪತ್ನಿ ಶ್ರೀಲತಾ ಅವರನ್ನೂ ವಿಚಾರಣೆ ನಡೆಸಲಾಗುತ್ತಿದ್ದು, ಬ್ಯಾಂಕ್ ಖಾತೆಯ ವಿವರಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ನೆಮ್ಮದಿಗೆ ಭಂಗ ತಂದ: ‘ಹಲವು ವರ್ಷಗಳಿಂದ ದುಬೈನಲ್ಲಿ ನೆಲೆಸಿರುವ ನಾನು, ನಿವೃತ್ತಿ ನಂತರ ಭಾರತಕ್ಕೆ ಬಂದು ನೆಲೆಸಲು ನಿರ್ಧರಿಸಿದ್ದೆ. ಜೀವನ ಪರ್ಯಂತ ದುಡಿದ ಹಣದಲ್ಲಿ ಬೆಂಗಳೂರಿನಲ್ಲೇ ಆಸ್ತಿ ಖರೀದಿಸಿ ನಿವೃತ್ತಿ ಜೀವನವನ್ನು ನಿಶ್ಚಿಂತೆಯಿಂದ ಕಳೆಯಬೇಕು ಎಂದುಕೊಂಡಿದ್ದೆ. ಆದರೆ, ಗಣೇಶ್ ಈಗ ನನ್ನ ನೆಮ್ಮದಿಯನ್ನೇ ಹಾಳು ಮಾಡಿದ್ದಾನೆ’ ಎಂದು ರಾಮಚಂದ್ರನ್ ದೂರಿನಲ್ಲಿ ಹೇಳಿದ್ದಾರೆ.

‘2013ರಲ್ಲಿ ದುಬೈನಲ್ಲಿ ನನ್ನನ್ನು ಭೇಟಿಯಾದ ಗಣೇಶ್, ‘ನಾನು ಹಾಗೂ ಪತ್ನಿ ಬೆಂಗಳೂರಿನ ಲ್ಯಾಂಡ್ ಸನ್‌ ಇನ್‌ಫ್ರಾಸ್ಟ್ರಕ್ಚರ್ ಕಂಪನಿಯಲ್ಲಿ ಹೂಡಿಕೆ ಮಾಡಿದ್ದೇವೆ. ನೀವೂ ಅದರಲ್ಲಿ ಪಾಲುದಾರರಾಗಿ. ಒಳ್ಳೆಯ ಲಾಭಾಂಶ ಕೊಡಿಸುತ್ತೇನೆ’ ಎಂದಿದ್ದ. ಈ ಮಾತನ್ನು ನಂಬಿದ ನಾನು, ಆತ ಸೂಚಿಸಿದ್ದ ಬ್ಯಾಂಕ್ ಖಾತೆಗೆಳಿಗೆ 2014ರಿಂದ 2016ರ ನಡುವೆ ₹ 6.44 ಕೋಟಿ ಜಮೆ ಮಾಡಿದ್ದೇನೆ. ಈಗ ನನ್ನ ಹಣವನ್ನೂ ನೀಡದೆ, ಲಾಭಾಂಶವನ್ನೂ ನೀಡದೆ ವಂಚಿಸಿದ್ದಾನೆ’ ಎಂದು ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.