ADVERTISEMENT

ಶೇ 70ರಷ್ಟು ಕಾಮಗಾರಿ ಪೂರ್ಣ: ಪರಮೇಶ್ವರ

ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರದ ಅನುದಾನದಲ್ಲಿ ಯೋಜನೆಗಳ ಅನುಷ್ಠಾನ

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 20:11 IST
Last Updated 4 ಜನವರಿ 2019, 20:11 IST
   

ಬೆಂಗಳೂರು: ಎರಡು ವರ್ಷಗಳಲ್ಲಿ ರಾಜ್ಯ ಸರ್ಕಾರದ ಅನುದಾನದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳಲ್ಲಿ ಶೇ 70ರಷ್ಟು ಕೆಲಸ ಪೂರ್ಣಗೊಂಡಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ತಿಳಿಸಿದರು.

ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಶುಕ್ರವಾರ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

‘ರಾಜ್ಯ ಸರ್ಕಾರ 2016–18ರಲ್ಲಿ ಬಿಡುಗಡೆ ಮಾಡಿದ ಅನುದಾನದಲ್ಲಿ ಟೆಂಡರ್‌ ಶ್ಯೂರ್‌ ರಸ್ತೆ ಅಭಿವೃದ್ಧಿ, ರಾಜಕಾಲುವೆ ಅಭಿವೃದ್ಧಿ,ವೈಟ್‌ಟಾಪಿಂಗ್‌ಗೆ ಆದ್ಯತೆ ನೀಡಲಾಗಿದೆ. ಶೇ 30 ರಷ್ಟು ಕಾಮಗಾರಿಗಳು ಮಾತ್ರ ಕಾರಣಾಂತರಗಳಿಂದ ಪೂರ್ಣಗೊಂಡಿಲ್ಲ. ಭೂಸ್ವಾಧೀನ ಪೂರ್ಣಗೊಳ್ಳದ ಕಾರಣ ಕೆಲವು ಕಾಮಗಾರಿಗಳನ್ನು ಆರಂಭಿಸಲು ತೊಡಕು ಎದುರಾಗಿದೆ’ ಎಂದು ವಿವರಿಸಿದರು.

ADVERTISEMENT

‘ಕಸ ವಿಲೇವಾರಿಗೆ ಹೆಚ್ಚು ಗಮನ ನೀಡಬೇಕು. ಗುತ್ತಿಗೆದಾರರಿಗೆ ಬಾಕಿ‌ ಉಳಿಸಿಕೊಂಡಿರುವ ಹಣವನ್ನು ಪಾವತಿಸಬೇಕು. ನಗರದಲ್ಲಿ ಮೂರು ಕಡೆ ಕಸದಿಂದ ವಿದ್ಯುತ್‌ ತಯಾರಿಸುವ ಘಟಕಗಳನ್ನು ಇದೇ ವರ್ಷದೊಳಗೆ ಆರಂಭಿಸಲು ಕ್ರಮ ಕೈಗೊಳ್ಳಬೇಕು. ತಗ್ಗು ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಪ್ರವಾಹ ಉಂಟಾಗುವುದನ್ನು ತಡೆಯುವ ಕಾರ್ಯಕ್ಕೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ತಿಳಿಸಿದರು.

‘2018–19ರ ಬಜೆಟ್‌ನಲ್ಲಿ ಪಾಲಿಕೆ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗೆ ₹ 2500 ಕೋಟಿ ಕಾಯ್ದಿರಿಸಲಾಗಿತ್ತು. ಈ ಅನುದಾನದಲ್ಲಿ ಶೇ 48ರಷ್ಟು ಬಳಕೆ ಆಗಿದೆ. ಕಾಮಗಾರಿ ಅನುಷ್ಠಾನಗೊಳಿಸಲು ಇನ್ನೂ ಮೂರು ತಿಂಗಳು ಅವಕಾಶ ಇದೆ. ಹೆಚ್ಚೆಂದರೆ ಶೇ 20ರಷ್ಟು ಕಾಮಗಾರಿ ಮುಂದಿನ ವರ್ಷಕ್ಕೆ ಮುಂದುವರಿಯುವ ಸಾಧ್ಯತೆ ಇದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಗರದಲ್ಲಿ ಎರಡು ವರ್ಷಗಳಿಂದ ವೈಟ್‌ಟಾಪಿಂಗ್‌ ಕಾಮಗಾರಿಗಳು ನಡೆಯುತ್ತಿದೆ. ಬಹುತೇಕ ಕಡೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು ಈ ಕಾಮಗಾರಿಗಳನ್ನು ಮೇ ಒಳಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಮಂಜೂರಾಗಿರುವ ಹೊಸ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

‘ಹಸ್ತಾಂತರವಾಗಿಲ್ಲ ರಕ್ಷಣಾ ಇಲಾಖೆ ಜಮೀನು’

‘ರಕ್ಷಣಾ ಇಲಾಖೆಯ ಜಮೀನು ಪಾಲಿಕೆಗೆ ಹಸ್ತಾಂತರವಾಗದ ಕಾರಣಕ್ಕೂ ಕೆಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ರಕ್ಷಣಾ ಇಲಾಖೆ ಜಾಗದಲ್ಲಿ ಸಾರ್ವಜನಿಕ ಕಾಮಗಾರಿ ಆರಂಭಿಸುವುದಕ್ಕೆ ತಾತ್ವಿಕ ಒಪ್ಪಿಗೆ ನೀಡಿದ್ದರು. ಆದರೆ, ಅಧಿಕಾರಿಗಳು ಇನ್ನಷ್ಟೇ ಈ ಕುರಿತು ಆದೇಶ ಮಾಡಬೇಕಿದೆ’ ಎಂದು ಸಚಿವ ಪರಮೇಶ್ವರ ತಿಳಿಸಿದರು.

ಬಾಕಿ ತೆರಿಗೆ ವಸೂಲಿಗೆ 3 ತಿಂಗಳ ಗಡುವು

ತೆರಿಗೆ ಬಾಕಿಯನ್ನು ಸಂಪೂರ್ಣ ವಸೂಲಿ ಮಾಡಲು ಸಚಿವ ಜಿ.ಪರಮೇಶ್ವರ ಅವರು ಪಾಲಿಕೆ ಅಧಿಕಾರಿಗಳಿಗೆ ಮೂರು ತಿಂಗಳ ಗಡುವು ವಿಧಿಸಿದ್ದಾರೆ.

ತೆರಿಗೆ ವಸೂಲಿ ಕುರಿತು ಸಚಿವರು ಶುಕ್ರವಾರ ಪ್ರಗತಿ ಪರಿಶೀಲನೆ ನಡೆಸಿದರು.

ತೆರಿಗೆ ಪಾವತಿಸದ 59,861 ಮಂದಿಗೆ ನೋಟಿಸ್ ನೀಡಿದ್ದು, ₹ 113 ಕೋಟಿ ಬಾಕಿ ತೆರಿಗೆ ಸಂಗ್ರಹವಾಗಿದೆ. 921 ಮಾಲೀಕರಿಗೆ ಸ್ವತ್ತು ಜಪ್ತಿ ವಾರೆಂಟ್‌ ನೀಡಿದ್ದರಿಂದ ₹ 36 ಕೋಟಿ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ತೆರಿಗೆ ಕಟ್ಟದವರಿಗೆ ಮುಲಾಜಿಲ್ಲದೇ ನೋಟಿಸ್ ನೀಡಿ. ಅದಕ್ಕೂ ಜಗ್ಗದಿದ್ದರೆ ಅವರ ವಿರುದ್ಧ ವಾರೆಂಟ್ ನೀಡುವ ಮೂಲಕ ಕ್ರಮ ತೆಗೆದುಕೊಳ್ಳಿ’ ಎಂದು ಸಚಿವರು ಸೂಚಿಸಿದರು.

‘ಆಸ್ತಿ ತೆರಿಗೆ ವಸೂಲಿ ವಿಚಾರದಲ್ಲಿ ಬಿಬಿಎಂಪಿ ಕಠಿಣ ಕ್ರಮ ತೆಗೆದುಕೊಂಡಿದ್ದರಿಂದ ಈ ಬಾರಿ ತೆರಿಗೆ ಸಂಗ್ರಹ ಹೆಚ್ಚಳವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು ₹ 150 ಕೋಟಿ ತೆರಿಗೆ ಹೆಚ್ಚು ಸಂಗ್ರಹವಾಗಿದೆ. ಈ ಆರ್ಥಿಕ ವರ್ಷದಲ್ಲಿ ಇನ್ನೂ ಮೂರು ತಿಂಗಳು ವಸೂಲಿಗೆ ಕಾಲಾವಕಾಶವಿದೆ. ಮಾರ್ಚ್‌ ಅಂತ್ಯದ ವೇಳೆ ₹ 3000 ತೆರಿಗೆ ಸಂಗ್ರವಾಗುವ ನಿರೀಕ್ಷೆ ಇದೆ’ ಎಂದು ಸಚಿವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.