ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯೂ ಸೇರಿದಂತೆ ನಗರದ ಸುತ್ತಮುತ್ತಲಲ್ಲಿ 80ರಿಂದ 85 ಚಿರತೆಗಳು ಇವೆ ಎಂದು ಹೊಳೆಮತ್ತಿ ನೇಚರ್ ಫೌಂಡೇಷನ್ ಅಂದಾಜು ಮಾಡಿದೆ.
ಫೌಂಡೇಷನ್‌ನ ಸಂಜಯ್ ಗುಬ್ಬಿ ಮತ್ತು ತಂಡದವರು ಕ್ಯಾಮೆರಾ ಟ್ರ್ಯಾಪ್‌ಗಳನ್ನು ಬಳಸಿ ಒಂದು ವರ್ಷ ಅಧ್ಯಯನ ನಡೆಸಿದ್ದರು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ 54 ಚಿರತೆಗಳು ಮತ್ತು ಬೆಂಗಳೂರಿನ ಸುತ್ತಮುತ್ತಲಿನ ಕಾಯ್ದಿಟ್ಟ ಮತ್ತು ಪರಿಭಾವಿತ ಅರಣ್ಯ ಪ್ರದೇಶಗಳಲ್ಲಿ 30 ಚಿರತೆಗಳಿವೆ ಎಂದು ಅಂದಾಜಿಸಿದ್ದಾರೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಸೇರಿ, ಬಿ.ಎಂ.ಕಾವಲ್, ಯು.ಎಂ. ಕಾವಲ್, ತುರಹಳ್ಳಿ, ತುರಹಳ್ಳಿಗುಡ್ಡ, ಸೂಳಿಕೆರೆ, ಹೆಸರಘಟ್ಟ, ಮಾರಸಂದ್ರ, ಮಂಡೂರು, ಸರ್ಕಾರಿ ಇಲಾಖೆಗಳ ಜಾಗಗಳು ಮತ್ತು ಹಲವು ಖಾಸಗಿ ಜಮೀನುಗಳನ್ನು ಒಳಗೊಂಡು ಸುಮಾರು 282 ಚದರ ಕಿ.ಮೀ. ಪ್ರದೇಶದಲ್ಲಿ ಅಧ್ಯಯನ ಕೈಗೊಂಡಿದ್ದರು.
ಚಿರತೆಗಳಲ್ಲದೆ ಇತರ 34 ಪ್ರಭೇದದ ಸ್ತನಿಗಳು ಪತ್ತೆಯಾಗಿವೆ. ಇವುಗಳಲ್ಲಿ ನಶಿಸುತ್ತಿರುವ ನಾಲ್ಕು ಪ್ರಭೇದಗಳು, ಅಪಾಯದ ಅಂಚಿನಲ್ಲಿರುವ ನಾಲ್ಕು ಪ್ರಭೇದಗಳೂ ಸೇರಿವೆ. 34 ಪ್ರಭೇದಗಳಲ್ಲಿ 22 ಪ್ರಭೇದದ ಸ್ತನಿಗಳು ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಪರಿಚ್ಛೇದ -1, ಮತ್ತು ಐದು ಪ್ರಭೇದಗಳನ್ನು ಪರಿಚ್ಛೇದ-2ರ ಅಡಿಯಲ್ಲಿ ಸಂರಕ್ಷಿಸಲಾಗಿದೆ.
ಮುಂಬೈ ನಗರಕ್ಕಿಂತ ಬೆಂಗಳೂರು ನಗರದಲ್ಲಿ ಹೆಚ್ಚು ಚಿರತೆಗಳಿರುವುದು ಈ ಅಧ್ಯಯನದಿಂದ ಸಾಬೀತಾಗಿದೆ. ಮುಂಬೈ ಆಸುಪಾಸಿನಲ್ಲಿ 54 ಚಿರತೆಗಳಿರುವುದು ದಾಖಲಾಗಿದೆ.
ಮಾಂಸಾಹಾರಿ ವನ್ಯಜೀವಿಗಳಾದ ಹುಲಿ, ಚಿರತೆ, ಸೀಳು ನಾಯಿ ಮತ್ತು ಸಸ್ಯಾಹಾರಿ ವನ್ಯಜೀವಿಗಳಾದ ಆನೆ, ಕಾಟಿ, ಕಡವೆಯಂತಹ ದೊಡ್ಡ ಕಶೇರುಕಗಳು ಮಹಾನಗರದ ಪಕ್ಕದಲ್ಲೇ ಇರುವ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಿದೆ. ಬನ್ನೇರುಘಟ್ಟ ಉದ್ಯಾನದಲ್ಲಿ 2019ರಲ್ಲಿ 40, 2020ರಲ್ಲಿ 47 ಚಿರತೆಗಳಿದ್ದವು. ಈಗ 54 ಚಿರತೆಗಳಿರುವುದು ಇವುಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಅಧ್ಯಯನ ತಂಡ ತಿಳಿಸಿದೆ.
ಅಧ್ಯಯನ ತಂಡದಲ್ಲಿ ಶ್ರವಣ್ ಸುಥಾರ್, ಸಂದೇಶ್ ಅಪ್ಪು ನಾಯ್ಕ್, ಪೂರ್ಣೇಶ ಎಚ್.ಸಿ., ಮಯೂರ್ ಮಿರಾಶಿ, ಐಶ್ವರ್ಯ ಕಾರಂತ್ ಮತ್ತಿತರರು ಇದ್ದರು.
ಶಿಫಾರಸುಗಳು
ಅಧ್ಯಯನದ ಆಧಾರದಲ್ಲಿ ಹೊಳೆಮತ್ತಿ ನೇಚರ್ ಫೌಂಡೇಷನ್ ಕೆಲವು ಶಿಫಾರಸುಗಳನ್ನು ಮಾಡಿದೆ. ಬಿ.ಎಂ.ಕಾವಲ್ ಯು.ಎಂ.ಕಾವಲ್ ರೋರಿಚ್ ಎಸ್ಟೇಟ್ ಮತ್ತು ಗುಲ್ಲಹಳ್ಳಿಗುಡ್ಡ ಕಾಡುಗಳನ್ನು ಸಂರಕ್ಷಣಾ ಮೀಸಲು ಪ್ರದೇಶ ಎಂದು ಘೋಷಿಸಬೇಕು. ದುರ್ಗದಕಲ್ ಬೆಟ್ಟಹಳ್ಳಿವಾಡೆ ಕಾಯ್ದಿಟ್ಟ ಅರಣ್ಯ ಪ್ರದೇಶಗಳು ಮತ್ತು ಜೆ.ಐ.ಬಾಚಹಳ್ಳಿ ಮತ್ತು ಎಂ.ಮಣಿಯಂಬಳ್ ಪ್ರದೇಶಗಳ ಪರಿಭಾವಿತ ಅರಣ್ಯ ಪ್ರದೇಶಗಳನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಸೇರಿಸಬೇಕು. ಮಾನವ-ಚಿರತೆ ಸಹಬಾಳ್ವೆಗೆ ಒತ್ತುಕೊಡಬೇಕು. ಮುನೇಶ್ವರಬೆಟ್ಟ-ಬನ್ನೇರುಘಟ್ಟ ವನ್ಯಜೀವಿ ಕಾರಿಡಾರ್ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಇತರ ಪ್ರದೇಶಗಳಲ್ಲಿ ಹಿಡಿದ ಚಿರತೆಗಳನ್ನು ಬನ್ನೇರುಘಟ್ಟಕ್ಕೆ ಸ್ಥಳಾಂತರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.