ADVERTISEMENT

ನಿವೇಶನ ಕೊಡಿಸುವುದಾಗಿ ₹9 ಲಕ್ಷ ವಂಚನೆ

ಹಣ ಪಡೆದು ತಲೆ ಮರೆಸಿಕೊಂಡ ನೌಕರ– ರೈಲ್ವೆ ಅಧಿಕಾರಿ ಆರೋಪ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 21:35 IST
Last Updated 11 ಅಕ್ಟೋಬರ್ 2020, 21:35 IST

ಬೆಂಗಳೂರು: ರೈಲ್ವೆ ಕೋ-ಆಪರೇಟಿವ್ ಸೊಸೈಟಿಯಿಂದ ನಿವೇಶನ ಕೊಡಿಸುವುದಾಗಿ ರೈಲ್ವೆ ಇಲಾಖೆಯ ನೌಕರ ಬಾಬು ಎಂಬಾತ ₹9 ಲಕ್ಷ ಪಡೆದು ವಂಚಿಸಿದ ಬಗ್ಗೆ ಚೆನ್ನೈ ರೈಲ್ವೆ ನಿಲ್ದಾಣದ ಉಪ ವಾಣಿಜ್ಯ ವ್ಯವಸ್ಥಾಪಕ ಸೆಂಥಿಲ್ ಕುಮಾರ್ ಇಲ್ಲಿನ ಸಿಟಿ ರೈಲ್ವೆ ಠಾಣೆಗೆ ದೂರು ನೀಡಿದ್ದಾರೆ

‘2014ರಲ್ಲಿ ಸೆಂಥಿಲ್ ಅವರು ಬೆಂಗಳೂರು ಸಿಟಿ ರೈಲು ನಿಲ್ದಾಣದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಈ ವೇಳೆ ಪರಿಚಯವಾಗಿದ್ದ ಬಾಬು, ನಿವೇಶನ ಕೊಡಿಸುವುದಾಗಿ ನಂಬಿಸಿ, ಎರಡು ಕಂತುಗಳಲ್ಲಿ ₹9 ಲಕ್ಷ ಪಡೆದಿದ್ದ. ಇದಾದ ಕೆಲ ತಿಂಗಳಲ್ಲೇ ಸೆಂಥಿಲ್ ಅವರಿಗೆ ಹುಬ್ಬಳ್ಳಿಗೆ ವರ್ಗಾವಣೆಯಾಗಿತ್ತು. ‘ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿದೆ. ಇನ್ನೂ 3ರಿಂದ 4 ವರ್ಷ ಆಗಬಹುದು’ ಆರೋಪಿ ಹೇಳಿದ್ದ. ಆತನ ಮೇಲೆ ಅನುಮಾನದಿಂದ ಅಧಿಕಾರಿಗಳನ್ನು ಸಲಹೆ ಕೇಳಿದಾಗ ಹಣ ವಾಪಸ್ ಪಡೆಯಲು ಸೆಂಥಿಲ್‍ಗೆ ಸೂಚಿಸಿದ್ದರು.’

‘ಇದೇ ವೇಳೆ ಸೇಂಥಿಲ್‌ ಅವರಿಗೆ ಚೆನ್ನೈಗೆ ವರ್ಗಾವಣೆಯಾಗಿದ್ದರಿಂದ ಅಲ್ಲಿಗೇ ಬಂದು ದಾಖಲೆಗಳನ್ನು ನೀಡುವುದಾಗಿಬಾಬು ಹೇಳಿದ್ದ. ಬಳಿಕ ಆತನ ಸುಳಿವೇ ಇರಲಿಲ್ಲ. ಹಾಗಾಗಿ, ತಲೆಮರೆಸಿಕೊಂಡಿರುವ ಆರೋಪಿ ಬಾಬು ವಿರುದ್ಧಸೆಂಥಿಲ್ ದೂರು ದಾಖಲಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ವಿಮೆ ಹೆಸರಿನಲ್ಲಿ ವೃದ್ಧನಿಗೆ ₹2 ಲಕ್ಷ ವಂಚನೆ

ಬೆಂಗಳೂರು: ಜೀವ ವಿಮಾ ಕಂಪನಿಯೊಂದರ ಹೆಸರಿನಲ್ಲಿ ವೃದ್ಧರೊಬ್ಬರಿಗೆ ₹2 ಲಕ್ಷ ವಂಚಿಸಿರುವ ಘಟನೆ ನಡೆದಿದ್ದು, ವಂಚನೆಗೊಳಗಾದ ವ್ಯಕ್ತಿ ವಿಜಯನಗರ ಠಾಣೆಗೆ ದೂರು ನೀಡಿದ್ದಾರೆ

ಆದಿತ್ಯ ಎಂಬಾತ ಪ್ರತಿಷ್ಠಿತ ವಿಮಾ ಕಂಪನಿಯ ಪ್ರತಿನಿಧಿ ಎಂದು ವಿಜಯನಗರ ನಿವಾಸಿ ನಾಗೇಂದ್ರ ಎಂಬ ವೃದ್ಧನನ್ನು ಪರಿಚಯ ಮಾಡಿಕೊಂಡಿದ್ದ.

ಹಿರಿಯ ನಾಗರಿಕರು ಹಣ ಹೂಡಿಕೆ ಮಾಡಿದರೆ ಶೇ 12.5ರಂತೆ ಬಡ್ಡಿ ಹಾಗೂ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಪಾವತಿಸುವುದಾಗಿ ಆಮಿಷವೊಡ್ಡಿ, ವೃದ್ಧನಿಂದ ₹2 ಲಕ್ಷ ಪಡೆದು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವೃದ್ಧನಿಂದ ₹2 ಲಕ್ಷದ ಚೆಕ್ ಪಡೆದಿದ್ದ ಆದಿತ್ಯ, ಹಣ ಡ್ರಾ ಮಾಡಿಕೊಂಡು ಬಳಿಕ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಕುರಿತು ಮಾಹಿತಿ ಪಡೆಯಲು ಸದರಿ ವಿಮಾ ಕಂಪನಿಗೆ ಭೇಟಿ ನೀಡಿದಾಗ ಆ ರೀತಿಯ ಯಾವುದೇ ಯೋಜನೆಗಳಿಲ್ಲ. ಅಂತಹ ವ್ಯಕ್ತಿಯೂ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ. ವಂಚನೆಯಾಗಿರುವುದು ತಿಳಿದು ವೃದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.