ADVERTISEMENT

‘ಜಲಮಿತ್ರ’ರಾಗಲು 9 ಸಾವಿರ ಮಂದಿಗೆ ಆಸಕ್ತಿ

5 ಲಕ್ಷ ನಲ್ಲಿಗಳಿಗೆ ಏರಿಯೇಟರ್‌; ಕಾವೇರಿ ನೀರು ಅನ್ಯ ಉದ್ದೇಶಕ್ಕೆ ಬಳಕೆ– 450 ಜನರಿಗೆ ದಂಡ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2024, 15:43 IST
Last Updated 20 ಏಪ್ರಿಲ್ 2024, 15:43 IST
ಜಲಮಂಡಳಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ‘ಜಲಮಿತ್ರ’ರಿಗೆ ಅಧ್ಯಕ್ಷ ಡಾ. ವಿ.ರಾಮ್‌ಪ್ರಸಾತ್‌ ಮನೋಹರ್‌ ಅವರು ಸಸಿಗಳನ್ನು ನೀಡಿ ಶುಭಹಾರೈಸಿದರು.
ಜಲಮಂಡಳಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ‘ಜಲಮಿತ್ರ’ರಿಗೆ ಅಧ್ಯಕ್ಷ ಡಾ. ವಿ.ರಾಮ್‌ಪ್ರಸಾತ್‌ ಮನೋಹರ್‌ ಅವರು ಸಸಿಗಳನ್ನು ನೀಡಿ ಶುಭಹಾರೈಸಿದರು.   

ಬೆಂಗಳೂರು: ನೀರು ಉಳಿತಾಯ, ಸಮರ್ಪಕ ಬಳಕೆ ಹಾಗೂ ಜಲಮಂಡಳಿ ವತಿಯಿಂದ ಕೈಗೊಳ್ಳಲಾಗುವ ಜನಜಾಗೃತಿಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ‘ಜಲಮಿತ್ರ’ರಿಗೆ ಪ್ರಮಾಣ ಪತ್ರ ನೀಡಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್‌ಪ್ರಸಾತ್ ಮನೋಹರ್ ಹೇಳಿದರು.

‘ಜಲಮಿತ್ರ’ರಿಗಾಗಿ ಶನಿವಾರ ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,  ‘ಸ್ವಯಂಪ್ರೇರಿತರಾಗಿ ‘ಜಲಮಿತ್ರ’ರಾಗಲು 30 ದಿನಗಳಲ್ಲಿ ಸುಮಾರು ಒಂಬತ್ತು ಸಾವಿರ ಜನರು ಮುಂದಾಗಿದ್ದಾರೆ‘ ಎಂದರು.

‘ದೂರದ ಕಾವೇರಿ ನದಿಯಿಂದ ನಗರಕ್ಕೆ ಸರಬರಾಜಾಗುವ ನೀರಿನ ಸದ್ಬಳಕೆ ಆಗುವುದು ಬಹಳ ಮುಖ್ಯ. ಪೋಲಾಗುವ ಪ್ರತಿ 1,000 ಲೀಟರ್ ನೀರಿನಿಂದ ಬೆಂಗಳೂರು ಜಲಮಂಡಳಿಗೆ ಸುಮಾರು ₹50 ನಷ್ಟವಾಗುತ್ತದೆ. ಇದರ ಅರಿವು ನಾಗರಿಕರಿಗೆ ಇರಬೇಕು. ಪಂಚಸೂತ್ರ ಸೇರಿದಂತೆ ಜಲಸಂರಕ್ಷಣೆಯ ಮಾಹಿತಿಯನ್ನು ‘ಜಲಮಿತ್ರ’ರು ಸಾರ್ವಜನಿಕರಿಗೆ ತಲುಪಿಸಲಿದ್ದಾರೆ. ಸಮೃದ್ಧ ಬೆಂಗಳೂರಿನ ಗುರಿಯನ್ನಿಟ್ಟುಕೊಂಡಿರುವ ‘ಜಲಮಿತ್ರ’ರು ನಮ್ಮ ಜಲಮಂಡಳಿಯ ರಾಯಭಾರಿಗಳು’ ಎಂದರು.

ADVERTISEMENT

ನಗರದಲ್ಲಿ ಈವರೆಗೆ ಐದು ಲಕ್ಷ ನಲ್ಲಿಗಳಿಗೆ ಏರಿಯೇಟರ್‌ಗಳನ್ನು ಅಳವಡಿಸಲಾಗಿದೆ.  ಇದರ ಅಳವಡಿಕೆಗೆ ಏಪ್ರಿಲ್‌ 30ರವರೆಗೆ ಗಡುವು ನೀಡಲಾಗಿದೆ. ಕಾವೇರಿ ನೀರನ್ನು ಅನ್ಯ ಉದ್ದೇಶಕ್ಕೆ ಬಳಸಿದ 450 ಜನರಿಗೆ ದಂಡ ವಿಧಿಸಲಾಗಿದೆ ಎಂದು ತಿಳಿಸಿದರು.

‘1200 ಅಡಿ ಕೊರೆದರೂ ನೀರಿಲ್ಲ’

‘ನಗರದಲ್ಲಿ ಈ ಮೊದಲು 400 ಅಡಿ ಕೊರೆದರೆ ನೀರು ಸಿಗುತ್ತಿತ್ತು. ಇದೀಗ 1200 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ನಾವೆಲ್ಲರೂ ಸೇರಿ ಮಳೆನೀರು ಇಂಗಿಸಲಿಕ್ಕೆ ಮುಂದಾಗಬೇಕು’ ಎಂದು ಜಲಮಂಡಳಿ ಅಧ್ಯಕ್ಷರು ಹೇಳಿದರು.  ಅಂತರ್ಜಲ ಮಟ್ಟ ಸುಧಾರಿಸಲು 15 ದಿನಗಳಲ್ಲಿ 15 ಕೆರೆಗಳನ್ನು ಸಂಸ್ಕರಿಸಿದ ನೀರಿನಿಂದ ತುಂಬಿಸಲಾಗಿದೆ. ವರ್ಷದಲ್ಲಿ 200 ಕೆರೆಗಳನ್ನು ತುಂಬಿಸುವ ಗುರಿ ಇದೆ. ಇದಕ್ಕೆ ಜಲಮಿತ್ರರ ಸಹಕಾರ ಅಗತ್ಯ ಎಂದರು. ಬೆಂಗಳೂರಿನಲ್ಲಿ ಉದ್ಭವಿಸಿದ್ದ ನೀರಿನ ಸಮಸ್ಯೆಯನ್ನು 45 ದಿನಗಳಲ್ಲಿ ಶೇ 80ರಷ್ಟು ಬಗೆಹರಿಸಿದ್ದೇವೆ. ಇನ್ನೂ ಕೆಲಕಡೆ ಸಮಸ್ಯೆಗಳಿದ್ದು ಅವುಗಳನ್ನು ಬಗೆಹರಿಸಲು ಮಂಡಳಿ ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.