ADVERTISEMENT

ಒಳ ಉಡುಪಿನಲ್ಲಿ ₹ 99.32 ಲಕ್ಷ ಮೌಲ್ಯದ ಚಿನ್ನ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 18:51 IST
Last Updated 30 ಸೆಪ್ಟೆಂಬರ್ 2021, 18:51 IST

ಬೆಂಗಳೂರು: ಒಳ ಉಡುಪಿನಲ್ಲಿ ಚಿನ್ನ ಬಚ್ಚಿಟ್ಟುಕೊಂಡು ಸಾಗಿಸುತ್ತಿದ್ದ ಆರೋಪದಡಿ ಪ್ರಯಾಣಿಕರೊಬ್ಬರನ್ನು ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

‘ಕೇರಳದ 26 ವರ್ಷದ ಆರೋಪಿ, ಮಾಲ್ಡೀವ್ಸ್‌ನಿಂದ ವಿಮಾನದಲ್ಲಿ ನಗರದ ನಿಲ್ದಾಣಕ್ಕೆ ಸೆ. 22ರಂದು ಬಂದಿಳಿದಿದ್ದ. ಆತನನ್ನು ತಪಾಸಣೆಗೆ ಒಳಪಡಿಸಿದಾಗ, ₹ 99.32 ಲಕ್ಷ ಮೌಲ್ಯದ 2 ಕೆ.ಜಿ ಚಿನ್ನದ ಪೇಸ್ಟ್ ಸಿಕ್ಕಿದೆ’ ಎಂದು ಕಸ್ಟಮ್ಸ್ ಮೂಲಗಳು ಹೇಳಿವೆ.

‘ಪ್ರವಾಸ ವೀಸಾ ಪಡೆದಿದ್ದ ಆರೋಪಿ, ಕೇರಳದಿಂದ ಇತ್ತೀಚೆಗೆ ಮಾಲ್ಡೀವ್ಸ್‌ಗೆ ಹೋಗಿದ್ದ. ಕೆಲದಿನ ಅಲ್ಲಿಯೇ ವಾಸವಿದ್ದ. ವೀಸಾ ಅವಧಿ ಮುಗಿಯುತ್ತಿದ್ದಂತೆ ಮಾಲ್ಡೀವ್ಸ್‌ನಿಂದ ಬೆಂಗಳೂರಿಗೆ ಬಂದಿಳಿದಿದ್ದ. ಆತನ ವರ್ತನೆಯಿಂದ ಅನುಮಾನಗೊಂಡ ಸಿಬ್ಬಂದಿ, ನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸಿದ್ದರು.’

ADVERTISEMENT

‘ಆರೋಪಿ ಬಳಿ ಚಿನ್ನವಿರುವುದು ಲೋಹ ಶೋಧಕದಿಂದ ಸುಳಿವು ಸಿಕ್ಕಿತ್ತು. ಆದರೆ, ಆತನ ಬ್ಯಾಗ್‌ ಪರಿಶೀಲಿಸಿದಾಗ ಚಿನ್ನವಿರಲಿಲ್ಲ. ನಂತರ, ಆತನನ್ನು ಕೊಠಡಿಗೆ ಕರೆದೊಯ್ದು ತಪಾಸಣೆ ನಡೆಸಲಾಯಿತು. ಆತನ ಒಳ ಉಡು‍ಪಿನಲ್ಲಿದ್ದ ಜೇಬಿನಲ್ಲಿ ಚಿನ್ನದ ಪೇಸ್ಟ್‌ ಪತ್ತೆಯಾಯಿತು. ಚಿನ್ನ ಸಾಗಿಸಲೆಂದೇ ಆರೋಪಿ, ಒಳ ಉಡುಪಿನ ಸುತ್ತಲೂ ಪ್ರತ್ಯೇಕ ಜೇಬು ಇರಿಸಿದ್ದ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.