ಸಾವು (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ನಗರದಲ್ಲಿ ಬಿಎಂಟಿಸಿ ಬಸ್ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಹೆಬ್ಬಾಳದ ವರ್ತುಲ ರಸ್ತೆಯ ಕಲ್ಯಾಣ ನಗರದ ಬಳಿ ಭಾನುವಾರ ನಡೆದಿದೆ.
ವೈಟ್‌ಫೀಲ್ಡ್‌ನ ಹೂಡಿ ನಿವಾಸಿ ಮೊಹಮ್ಮದ್ ಜಮ್ಷೀರ್ (42) ಮೃತ ವ್ಯಕ್ತಿ. ಇವರು ಸ್ವಂತ ಗ್ಯಾರೇಜ್ ನಡೆಸುತ್ತಿದ್ದರು.
ಮಹದೇವಪುರದ ಕಾವೇರಿ ನಗರದಿಂದ ಡಿ.ಜೆ ಹಳ್ಳಿಯಲ್ಲಿರುವ ಅತ್ತೆ ಮನೆಗೆ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಬೆಳಿಗ್ಗೆ 11 ಗಂಟೆ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಜಮ್ಷೀರ್ ಅವರ ತಲೆ ಮೇಲೆ ಬಸ್ ಚಕ್ರಗಳು ಹರಿದಿವೆ.
ಕೆಳಗೆ ಬಿದ್ದ ಪತ್ನಿ ಆಯಿಷಾ ಅವರ ಬಲಗೈ ಹಾಗೂ ಕಾಲು ಮುರಿದಿದೆ. ಮಕ್ಕಳಾದ ಆಫೀಯಾ (1.5 ವರ್ಷ) ಮತ್ತು ಅಲೀಜಾ (4 ವರ್ಷ) ಅವರ ಕೈ, ಕಾಲಿಗೂ ಪೆಟ್ಟು ಬಿದ್ದಿದೆ. ಮೂವರಿಗೆ ಅಂಬೇಡ್ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜಮ್ಷೀರ್ ಅವರ ಮರಣೋತ್ತರ ಪರೀಕ್ಷೆ ನಡೆಸಿ, ವಾರಸುದಾರರಿಗೆ ನೀಡಲಾಯಿತು.
ಬಾಣಸವಾಡಿ ಠಾಣೆ ಸಂಚಾರ ಪೊಲೀಸರು ಬಿಎಂಟಿಸಿ ಬಸ್ ಚಾಲಕನನ್ನು ಬಂಧಿಸಿ, ಬಸ್ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.