ಬೆಂಗಳೂರು: ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಅಕ್ಷಯ್ ಅವರು ಕೋಮಾ ಸ್ಥಿತಿಗೆ ತಲುಪಿದ್ದು, ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.
ಬನಶಂಕರಿಯ ಬ್ರಹ್ಮಚೈತನ್ಯ ಮಂದಿರದ ಬಳಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ವೇಳೆ ಭಾನುವಾರ ಮಧ್ಯಾಹ್ನ ಮರದ ಕೊಂಬೆ ಬಿದ್ದು, ಶ್ರೀನಗರ ನಿವಾಸಿ ಅಕ್ಷಯ್ ಅವರ ತಲೆಗೆ ತೀವ್ರ ಗಾಯವಾಗಿದ್ದು, ಸ್ಥಳೀಯರು ತಕ್ಷಣ ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ನರರೋಗ ತಜ್ಞ ಡಾ.ಶ್ರೀದತ್ ಮಾತನಾಡಿ, ‘ ಅಕ್ಷಯ್ ಅವರ ತಲೆ ಬುರುಡೆಗೆ ತೀವ್ರ ಪೆಟ್ಟು ಬಿದ್ದಿದ್ದು, ಭಾನುವಾರ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಯಕ್ಕೆ ಪರಿಸ್ಥಿತಿ ಚಿಂತಾಜನಕವಾಗಿದೆ. ಅಂಗಾಂಗಗಳು ಕೆಲಸ ಮಾಡಲು ಔಷಧ ನೀಡಲಾಗುತ್ತಿದೆ. ಮಿದುಳಿಗೆ ದೊಡ್ಡ ಪೆಟ್ಟಾಗಿದೆ. ಈಗಲೇ ಏನೂ ಹೇಳಲು ಆಗುವುದಿಲ್ಲ, ಕೋಮಾ ಸ್ಥಿತಿ ತಲುಪಿದ್ದಾರೆ’ ಎಂದು ತಿಳಿಸಿದರು.
ಖಾಸಗಿ ಸಂಸ್ಥೆ ಉದ್ಯೋಗಿಯಾಗಿದ್ದ ಅಕ್ಷಯ್, ಭಾನುವಾರ ತಂದೆಯ ಜನ್ಮದಿನದ ಪ್ರಯುಕ್ತ ಕುರಿ ಮಾಂಸ ತೆಗೆದುಕೊಂಡು ಬರುವುದಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದರು. ಜೋರು ಗಾಳಿಗೆ ಮರದ ಕೊಂಬೆ ಮುರಿದು ಅವರ ತಲೆ ಮೇಲೆ ಬಿದ್ದಿತ್ತು. ತಲೆ ಬುರುಡೆಯಲ್ಲಿ ಸುಮಾರು 10ಕ್ಕೂ ಅಧಿಕ ಕಡೆ ಗಾಯವಾಗಿತ್ತು.
‘ತಂದೆ ಮೂತ್ರಪಿಂಡ ಸಮಸ್ಯೆಯಿಂದ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಕ್ಷಯ್ ದುಡಿದು ಮನೆ ನಡೆಸುವುದರ ಜೊತೆಗೆ ತಂದೆಗೆ ಚಿಕಿತ್ಸೆ ಕೊಡಿಸುತ್ತಿದ್ದರು. ಅವರ ಆರೋಗ್ಯದ ಬಗ್ಗೆ ವೈದ್ಯರು ಈಗಲೇ ಏನೂ ಹೇಳಲು ಆಗುವುದಿಲ್ಲ ಎಂದಿದ್ದಾರೆ. ದಿಕ್ಕು ತೋಚುತ್ತಿಲ್ಲ’ ಎಂದು ಸಹೋದರ ಬೆನಕ ಹೇಳಿದರು.
‘ರಭಸದ ಗಾಳಿ ಬೀಸಿದ ಪರಿಣಾಮ ಒಣಗಿದ ಕೊಂಬೆ ಬಿದ್ದು ಈ ಅನಾಹುತವಾಗಿದೆ. ಚಿಕಿತ್ಸಾ ವೆಚ್ಚವನ್ನು ಬಿಬಿಎಂಪಿಯೇ ಭರಿಸಲಿದೆ ಎಂದು ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿಎಲ್‌ಜಿ ಸ್ವಾಮಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.