ADVERTISEMENT

ಸಚಿವ ಸ್ಥಾನದಿಂದ ಮುನಿರತ್ನ ವಜಾಗೆ ಎಎಪಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2022, 19:45 IST
Last Updated 11 ಫೆಬ್ರುವರಿ 2022, 19:45 IST
   

ಬೆಂಗಳೂರು: ‘ರಾಜರಾಜೇಶ್ವರಿ ನಗರದಲ್ಲಿ ನಡೆದಿರುವ ಭಾರಿ ಅಕ್ರಮಗಳು ಲೋಕಾಯುಕ್ತ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಅಕ್ರಮಗಳ ಸೂತ್ರಧಾರರು ಹಾಗೂ ಕ್ಷೇತ್ರದ ಶಾಸಕರೂ ಆಗಿರುವ ಮುನಿರತ್ನ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು’ ಎಂದು ಆಮ್‌ ಆದ್ಮಿ ಪಕ್ಷ (ಎಎಪಿ) ಆಗ್ರಹಿಸಿದೆ.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ, ‘ಮುಖ್ಯಮಂತ್ರಿಯ ನವನಗರೋತ್ಥಾನ ಯೋಜನೆಯಡಿ ಕೆಆರ್‌ಐಡಿಎಲ್‌ಗೆ ನಕಲಿ ಬಿಲ್‌ ಪಾವತಿಸಲಾಗಿದೆ. ಕೆಲವು ಕಾಮಗಾರಿಗಳ ಅನುಷ್ಠಾನವೇ ಆಗಿಲ್ಲ‌. ಕಳಪೆ ಗುಣಮಟ್ಟದ ಕಾಮಗಾರಿ ಹಾಗೂ ಟೆಂಡರ್‌ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಇದರಿಂದ ಸರ್ಕಾರಕ್ಕೆ ₹118.26 ಕೋಟಿ ನಷ್ಟವಾಗಿರುವ ಬಗ್ಗೆ ಲೋಕಾಯುಕ್ತ ವರದಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದರು.

‘ಲೋಕಾಯುಕ್ತ ನ್ಯಾಯಮೂರ್ತಿಯಾಗಿದ್ದ ಪಿ.ವಿಶ್ವನಾಥ ಶೆಟ್ಟಿ ಅವರುಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಿದ್ದರೂ ಈವರೆಗೆ ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಟೆಂಡರ್‌ನಲ್ಲಿ ಅಕ್ರಮ ಎಸಗಿರುವ ಸಿವಿಲ್‌ ಸ್ಕ್ವೇರ್‌ ಕನ್ಸಲ್ಟಂಟ್ಸ್‌ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ವರದಿಯಲ್ಲಿ ಆಪಾದಿತರೆಂದು ಹೇಳಲಾಗಿರುವ ಎಲ್ಲ ಅಧಿಕಾರಿಗಳನ್ನು ಶಿಕ್ಷೆಗೆ ಒಳಪಡಿಸಬೇಕು. ಮುನಿರತ್ನ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿ, ವಿಚಾರಣೆಗೆ ಒಳಪಡಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಪಕ್ಷದ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ,‘2018ರ ಚುನಾವಣೆಯಲ್ಲಿ ಮುನಿರತ್ನ ಭಾರಿ ಅಕ್ರಮ ಮಾಡಿದ್ದನ್ನು ಬಿಜೆಪಿ ನಾಯಕರೇ ಸಾಕ್ಷಿಸಹಿತ ಬಹಿರಂಗಪಡಿಸಿದ್ದರು. ಆದರೆ, ಮುನಿರತ್ನ ಬಿಜೆಪಿ ಸೇರಿದ ನಂತರ ಬಿಜೆಪಿಯವರು ಪ್ರಕರಣ ಹಿಂಪಡೆದು ಆರೋಪಿಯನ್ನು ರಕ್ಷಿಸಿದ್ದರು. ಅದೇ ರೀತಿ ಈ ಹಗರಣವನ್ನೂ ಮೂಲೆಗುಂಪು ಮಾಡಲು ಅವಕಾಶ ನೀಡುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಪ್ರತಿಭಟನೆ ನಡೆಸಲಾಗುವುದು’ ಎಂದೂ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.