ADVERTISEMENT

ಬೆಂಗಳೂರು | ಲಂಚ: ಹೊರ ಗುತ್ತಿಗೆ ನೌಕರನ ಬಂಧನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2022, 16:30 IST
Last Updated 18 ಫೆಬ್ರುವರಿ 2022, 16:30 IST

ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ರೈತರೊಬ್ಬರಿಂದ ರಾಗಿ ಖರೀದಿಸಲು ₹ 1,500 ಲಂಚ ಪಡೆಯುತ್ತಿದ್ದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ (ಕೆಎಫ್‌ಸಿಎಸ್‌ಸಿ) ಕೆಂಗೇರಿ ಖರೀದಿ ಕೇಂದ್ರದಲ್ಲಿ ಹೊರ ಗುತ್ತಿಗೆ ನೌಕರರಾಗಿರುವ ಲಿಂಗಯ್ಯ ಎಂಬುವವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿದೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ಅರಳಿಮರಪಾಳ್ಯದ ನಿವಾಸಿಯೊಬ್ಬರು ನಾಗದೇವನಹಳ್ಳಿಯಲ್ಲಿರುವ ಕೆಂಗೇರಿ ಹೋಬಳಿ ಮಟ್ಟದ ಕೆಎಫ್‌ಸಿಎಸ್‌ಸಿ ಎಂಎಸ್‌ಪಿ ರಾಗಿ ಖರೀದಿ ಕೇಂದ್ರಕ್ಕೆ ರಾಗಿಯನ್ನು ತೆಗೆದುಕೊಂಡು ಹೋಗಿದ್ದರು. 20 ಕ್ವಿಂಟಲ್‌ ರಾಗಿ ಖರೀದಿಗೆ ₹ 1,500 ಲಂಚ ನೀಡುವಂತೆ ಅಲ್ಲಿನ ಹೊರ ಗುತ್ತಿಗೆ ನೌಕರ ಬೇಡಿಕೆ ಇಟ್ಟಿದ್ದರು.

ಲಂಚಕ್ಕೆ ಬೇಡಿಕೆ ಇಟ್ಟಿರುವ ಕುರಿತು ರೈತ ಎಸಿಬಿ ಬೆಂಗಳೂರು ನಗರ ಘಟಕಕ್ಕೆ ದೂರು ಸಲ್ಲಿಸಿದ್ದರು. ಶುಕ್ರವಾರ ಕಾರ್ಯಾಚರಣೆ ನಡೆಸಿ, ಲಂಚದ ಹಣದ ಸಮೇತ ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.