ADVERTISEMENT

ಐಎಎಸ್‌ ಅಧಿಕಾರಿ ಮಂಜುನಾಥ್‌ ಮನೆಯಲ್ಲಿ ಎಸಿಬಿ ಶೋಧ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 16:33 IST
Last Updated 5 ಜುಲೈ 2022, 16:33 IST
ಜೆ. ಮಂಜುನಾಥ್
ಜೆ. ಮಂಜುನಾಥ್   

ಬೆಂಗಳೂರು: ಭೂ ಒಡೆತನಕ್ಕೆ ಸಂಬಂಧಿಸಿದ ವ್ಯಾಜ್ಯವೊಂದರಲ್ಲಿ ಅನುಕೂಲಕರ ಆದೇಶ ನೀಡಲು ₹ 5 ಲಕ್ಷ ಲಂಚ ಪಡೆದ ಆರೋಪದ ಮೇಲೆ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಐಎಎಸ್‌ ಅಧಿಕಾರಿ ಜೆ. ಮಂಜುನಾಥ್‌ ಅವರ ಮನೆ ಮೇಲೆ ಮಂಗಳವಾರ ದಾಳಿಮಾಡಿದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಶೋಧ ನಡೆಸಿತು.

ಬೆಂಗಳೂರು ನಗರ ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದ ಅವಧಿಯಲ್ಲಿ ಲಂಚ ಪಡೆದ ಆರೋಪ ಮಂಜುನಾಥ್‌ ಮೇಲಿದೆ. ಮೇ 21ರಂದು ಜಿಲ್ಲಾಧಿಕಾರಿ ಕಚೇರಿಯ ಉಪ ತಹಶೀಲ್ದಾರ್‌ ಮಹೇಶ್‌ ಮತ್ತು ನ್ಯಾಯಾಲಯ ವಿಭಾಗದ ಸಹಾಯಕ ಚೇತನಕುಮಾರ್‌ ಅಲಿಯಾಸ್‌ ಚಂದ್ರು ಎಂಬುವವರನ್ನು ಎಸಿಬಿ ಬಂಧಿಸಿತ್ತು. ಇದೇ ಪ್ರಕರಣದಲ್ಲಿ ಮಂಜುನಾಥ್‌ ಅವರನ್ನು ಸೋಮವಾರ ಬಂಧಿಸಿದ್ದು, ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ನ್ಯಾಯಾಲಯದಿಂದ ಶೋಧನಾ ವಾರೆಂಟ್‌ ಪಡೆದು ಯಶವಂತಪುರದಲ್ಲಿರುವ ಮಂಜುನಾಥ್‌ ಅವರ ಫ್ಲ್ಯಾಟ್‌ ಮೇಲೆ ಮಂಗಳವಾರ ಬೆಳಿಗ್ಗೆ ದಾಳಿಮಾಡಿದ ಎಸಿಬಿ ಅಧಿಕಾರಿಗಳು, ರಾತ್ರಿಯವರೆಗೂ ಶೋಧ ನಡೆಸಿದರು. ಕೆಲವು ಮಹತ್ವದ ದಾಖಲೆಗಳನ್ನು ಅಧಿಕಾರಿಯ ನಿವಾಸದಿಂದ ವಶಪಡಿಸಿಕೊಂಡಿದ್ದು, ಪರಿಶೀಲಿಸಲಾಗುತ್ತಿದೆ ಎಂದು ತನಿಖಾ ಸಂಸ್ಥೆ ಹೇಳಿದೆ.

ADVERTISEMENT

ಮಂಜುನಾಥ್‌ ಹೊಂದಿರುವ ಆಸ್ತಿಗಳ ಕುರಿತೂ ಎಸಿಬಿ ಪರಿಶೀಲನೆ ನಡೆಸುತ್ತಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವುದು ಪತ್ತೆಯಾದಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಪ್ರತ್ಯೇಕ ಎಫ್‌ಐಆರ್‌ ದಾಖಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.