ADVERTISEMENT

ಬೆಂಗಳೂರು: ಖಾತಾ ಬದಲಾವಣೆಗೆ ಲಂಚ, ದಲ್ಲಾಳಿ ಬಂಧನ

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 7:34 IST
Last Updated 31 ಜುಲೈ 2021, 7:34 IST

ಬೆಂಗಳೂರು: ನಿವೇಶನದ ಖಾತಾ ಬದಲಾವಣೆ ಪ್ರಕ್ರಿಯೆ ಪೂರೈಸಲು ಬಿಬಿಎಂಪಿ ರಾಜರಾಜೇಶ್ವರಿ ವಲಯ ಕಚೇರಿಯ ತೆರಿಗೆ ನಿರೀಕ್ಷಕನ ಪರವಾಗಿ ₹ 7,000 ಲಂಚ ಪಡೆದ ದಲ್ಲಾಳಿಯನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶುಕ್ರವಾರ ಬಂಧಿಸಿದೆ. ತೆರಿಗೆ ನಿರೀಕ್ಷಕ ತಲೆಮರೆಸಿಕೊಂಡಿದ್ದಾರೆ.

ತೆರಿಗೆ ನಿರೀಕ್ಷಕ ಬಾಬು ಎಂಬುವವರ ಕಚೇರಿಯಲ್ಲಿ ಮಧ್ಯವರ್ತಿಯಾಗಿದ್ದ ಸಂತೋಷ್‌ ಎಂಬ ಖಾಸಗಿ ವ್ಯಕ್ತಿ ಬಂಧಿತ. ಬಾಬು ಹಾಗೂ ಇತರ ಆರೋಪಿಗಳು ಎಸಿಬಿ ಅಧಿಕಾರಿಗಳ ಕಾರ್ಯಾಚರಣೆ ವಿಷಯ ತಿಳಿದು ನಾಪತ್ತೆಯಾಗಿದ್ದಾರೆ. ಅವರ ಬಂಧನಕ್ಕೆ ಶೋಧ ನಡೆದಿದೆ.

ರಾಜರಾಜೇಶ್ವರಿ ನಗರ ವಲಯ ಕಚೇರಿಯ ವ್ಯಾಪ್ತಿಯಲ್ಲಿ ಸ್ಥಿರಾಸ್ತಿ ಹೊಂದಿರುವ ವ್ಯಕ್ತಿಯೊಬ್ಬರು ಖಾತಾ ಬದಲಾವಣೆ ಕೋರಿ ಅರ್ಜಿ ಸಲ್ಲಿಸಿದ್ದರು. ಅಧಿಕಾರಿ ಬಾಬು ಪರವಾಗಿ ಮಾತುಕತೆ ನಡೆಸಿದ್ದ ದಲ್ಲಾಳಿ ಸಂತೋಷ್‌, ₹ 10,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಚೌಕಾಸಿ ಮಾಡಿದಾಗ ₹ 7,000 ನೀಡಿದರೆ ಖಾತಾ ಬದಲಾವಣೆ ಮಾಡುವುದಾಗಿ ಒಪ್ಪಿಕೊಂಡಿದ್ದ. ಈ ಕುರಿತು ಆಸ್ತಿ ಮಾಲೀಕರು ಎಸಿಬಿ ಬೆಂಗಳೂರು ನಗರ ಘಟಕಕ್ಕೆ ದೂರು ನೀಡಿದ್ದರು.

ADVERTISEMENT

ಶುಕ್ರವಾರ ತೆರಿಗೆ ನಿರೀಕ್ಷಕರ ಕಚೇರಿಯಲ್ಲೇ ಲಂಚ ಪಡೆದ ಸಂತೋಷ್‌ನನ್ನು ಎಸಿಬಿ ಡಿವೈಎಸ್‌ಪಿ ಪ್ರತಾಪ್‌ ರೆಡ್ಡಿ ನೇತೃತ್ವದ ತಂಡ ಬಂಧಿಸಿದೆ. ಖಾತಾ ಬದಲಾವಣೆಗೆ ಸಂಬಂಧಿಸಿದ ಕಡತವನ್ನೂ ಆರೋಪಿಯಿಂದ ವಶಕ್ಕೆ ಪಡೆಯಲಾಗಿದೆ. ಎಸಿಬಿ ಬೆಂಗಳೂರು ನಗರ ಎಸ್‌.ಪಿ. ಯತೀಶ್‌ ಚಂದ್ರ ಜಿ.ಎಚ್‌. ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.