ADVERTISEMENT

ಅಡ್ಡಾದಿಡ್ಡಿ ಜೀಪು ಚಾಲನೆ: ಗಾಯ

ಕಾಮಾಕ್ಷಿಪಾಳ್ಯದಲ್ಲಿ ಘಟನೆ; ಮೂವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2019, 20:24 IST
Last Updated 7 ಸೆಪ್ಟೆಂಬರ್ 2019, 20:24 IST
.
.   

ಬೆಂಗಳೂರು: ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಅಭಿಲಾಷ್ (20) ಎಂಬಾತ ಅಡ್ಡಾದಿಡ್ಡಿಯಾಗಿ ಜೀಪು ಚಲಾಯಿಸಿ ಫುಟ್‌ಪಾತ್‌ ಮೇಲಿದ್ದ ವಿದ್ಯುತ್ ಕಂಬಕ್ಕೆ ಗುದ್ದಿಸಿದ್ದು, ಈ ಅವಘಡದಲ್ಲಿ ಶಾಲಾ ವಿದ್ಯಾರ್ಥಿನಿ ಸೇರಿ ಮೂವರು ಗಾಯಗೊಂಡಿದ್ದಾರೆ.

ಶನಿವಾರ ಮಧ್ಯಾಹ್ನ ನಡೆದಿರುವ ಘಟನೆ ಸಂಬಂಧ, ಕಾಮಾಕ್ಷಿಪಾಳ್ಯದ ನಿವಾಸಿ ಅಭಿಲಾಷ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೀಪು ಜಪ್ತಿ ಮಾಡಿದ್ದಾರೆ.

‘ವಿದ್ಯಾರ್ಥಿ ಆಗಿರುವ ಅಭಿಲಾಷ್ ಹಾಗೂ ಆತನ ಸ್ನೇಹಿತರು, ಕ್ರಿಕೆಟ್ ಆಡಲು ಮೈದಾನವೊಂದಕ್ಕೆ ಬಂದಿದ್ದರು. ಸ್ನೇಹಿತನೊಬ್ಬ ತನ್ನ ತಂದೆಯ ಮಹೀಂದ್ರ ಜೀಪು ತೆಗೆದುಕೊಂಡು ಬಂದಿದ್ದ. ಅಭಿಲಾಷ್, ಸ್ನೇಹಿತನಿಂದ ಕೀ ಪಡೆದು ಜೀಪು ಚಲಾಯಿಸಿಕೊಂಡು ರಸ್ತೆಗೆ ಬಂದಿದ್ದ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಜೀಪಿನಲ್ಲಿ ಆರೋಪಿಯ ಸ್ನೇಹಿತರು ಇದ್ದರು. ಮುಖ್ಯರಸ್ತೆಯಲ್ಲೇ ನಿರ್ಲಕ್ಷ್ಯದಿಂದ ಜೀಪು ಚಲಾಯಿಸಿದ್ದರಿಂದ, ನಿಯಂತ್ರಣ ತಪ್ಪಿತ್ತು. ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದ ಜೀಪು, ಫುಟ್‌ಪಾತ್ ಏರಿತ್ತು. ನಡೆದುಕೊಂಡು ಹೊರಟಿದ್ದ ಶಾಲಾ ವಿದ್ಯಾರ್ಥಿನಿ ಸಾಯಿಸ್ನೇಹ (11) ಸೇರಿ ಮೂವರಿಗೆ ಗುದ್ದಿತ್ತು. ನಂತರ, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತುಕೊಂಡಿತ್ತು. ಈ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿಕೆ ನೀಡಿದ್ದಾರೆ’ ಎಂದು ವಿವರಿಸಿದರು.

‘ಘಟನೆಯಲ್ಲಿ ಗಾಯಗೊಂಡಿರುವ ಸಾಯಿಸ್ನೇಹ ಯೂನಿಟಿ ಲೈಫ್‌ಲೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ದ್ವಿಚಕ್ರ ವಾಹನ ಸಂಪೂರ್ಣ ಜಖಂಗೊಂಡಿದೆ. ಮಹೀಂದ್ರ ಜೀಪಿನ ಮಾಲೀಕ ಹಾಗೂ ಆರೋಪಿಯ ಸ್ನೇಹಿತನನ್ನು ವಿಚಾರಣೆಗೆ ಒಳಪಡಿಸಬೇಕಿದೆ’ ಎಂದು ಹೇಳಿದರು.

ಕ್ರೀಡೆಯಲ್ಲಿ ಭಾಗವಹಿಸಲು ತಯಾರಿ

‘ಅವಘಡದಲ್ಲಿ ಗಾಯಗೊಂಡಿರುವ ಸಾಯಿಸ್ನೇಹ, ರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಲು ತಯಾರಿ ನಡೆಸಿದ್ದರು. ಅದಕ್ಕಾಗಿ ಶೂ ಖರೀದಿಸಲು ತಂದೆ ಜೊತೆಯಲ್ಲಿ ಅಂಗಡಿಗೆ ಬಂದಿದ್ದರು. ಅದೇ ವೇಳೆ ಜೀಪು ಗುದ್ದಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.