ADVERTISEMENT

ಅಪಘಾತ ಪರಿಹಾರ| ನಕಲಿ ಬಿಲ್‌ಗಳ ಕುರಿತು ಎಚ್ಚರವಿರಲಿ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 20:16 IST
Last Updated 22 ಜೂನ್ 2022, 20:16 IST
   

ಬೆಂಗಳೂರು: ‘ಅಪಘಾತ ಪ್ರಕರಣಗಳಲ್ಲಿ ಪರಿಹಾರ ಕೋರಿ ಅರ್ಜಿ ಸಲ್ಲಿಸಿದಾಗ, ಅದರೊಂದಿಗೆ ಲಗತ್ತಿಸುವ ಪ್ರತಿಯೊಂದು ವೈದ್ಯಕೀಯ ಬಿಲ್‌ಗಳ ನೈಜತೆಯನ್ನು ನಿಕಶಕ್ಕೆ ಒಡ್ಡಿ ಪರಿಶೀಲಿಸುವುದು ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣಗಳ (ಎಂಎಸಿಟಿ) ಕರ್ತವ್ಯ’ ಎಂದು ಹೈಕೋರ್ಟ್ ಆದೇಶಿಸಿದೆ.

ಅಪಘಾತ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬರಿಗೆ ₹ 5.98 ಲಕ್ಷ ಪರಿಹಾರ ಘೋಷಿಸಿದ್ದ ಎಂಎಸಿಟಿ ಆದೇಶವನ್ನು ಪ್ರಶ್ನಿಸಿ, ‘ಓರಿಯೆಂಟಲ್ ವಿಮಾ ಕಂಪನಿ’ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಜೆ.ಎಂ. ಖಾಜಿ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.

‘ಸಂತ್ರಸ್ತೆಯು ಅಪಘಾತದಿಂದ ಉಂಟಾದ ಗಾಯಕ್ಕೆ ಪಡೆದ ವೈದ್ಯಕೀಯ ಚಿಕಿತ್ಸೆ ಬಿಲ್‌ಗಳಲ್ಲಿ ಕೆಲವು ಕಲರ್ ಜೆರಾಕ್ಸ್‌ ಇವೆ. ಅಸಲಿ ಬಿಲ್ ನೀಡದಿರುವುದಕ್ಕೆ ಸಮಂಜಸ ಕಾರಣ ನೀಡಿಲ್ಲ. ಆದರೂ, ನ್ಯಾಯಾಧಿಕರಣ ಈ ಪ್ರಕರಣ ದಲ್ಲಿಜೆರಾಕ್ಸ್ ಬಿಲ್‌ಗಳನ್ನೇ ಪರಿಗಣಿಸಿ ವೈದ್ಯಕೀಯ ಚಿಕಿತ್ಸೆಗೆ ₹ 2.26 ಲಕ್ಷ ಪರಿಹಾರ ನಿಗದಿಪಡಿಸಿದೆ.ಪರಿಹಾರ ಪ್ರಮಾಣ ಹೆಚ್ಚಿಸುವ ದುರುದ್ದೇಶದಿಂದಲೇ ಕೆಲವೊಂದು ಬಿಲ್‌ಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ನೀಡಲಾಗಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ADVERTISEMENT

‘ಬಿಲ್‌ಗಳ ನೈಜತೆಯನ್ನು ಸೂಕ್ಷ್ಮವಾಗಿ ಗಮನಿಸುವಲ್ಲಿ ನ್ಯಾಯಾಧಿಕರಣ ವಿಫಲವಾಗಿದೆ. ಹಾಗಾಗಿ, ಪ್ರತಿಯೊಂದು ವೈದ್ಯಕೀಯ ಬಿಲ್‌ನ ನೈಜತೆ ಪರಿಶೀಲಿಸುವುದು ನ್ಯಾಯಾಧಿಕರಣದ ಕರ್ತವ್ಯ’ ಎಂದು ನ್ಯಾಯಪೀಠ, ಸಂತ್ರಸ್ತ ಮಹಿಳೆಗೆ ಘೋಷಿಸಿದ್ದ ₹ 5.98 ಲಕ್ಷ ಮೊತ್ತವನ್ನು ₹ 2,89,540ಕ್ಕೆ ಇಳಿಸಿ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.