ADVERTISEMENT

ಹೆಸರಘಟ್ಟ ಮುಖ್ಯ ರಸ್ತೆಯಲ್ಲಿ ಹೆಚ್ಚುತ್ತಿರುವ ಅಪಘಾತಗಳು

​ಪ್ರಜಾವಾಣಿ ವಾರ್ತೆ
Published 25 ಮೇ 2025, 0:14 IST
Last Updated 25 ಮೇ 2025, 0:14 IST
ಹೆಸರಘಟ್ಟ ಮುಖ್ಯ ರಸ್ತೆಯ ಡೆಪೋಡೀಲ್ಸ್ ಅಪಾರ್ಟ್ಮೆಂಟ್ ಮುಂಭಾಗ ರಸ್ತೆ
ಹೆಸರಘಟ್ಟ ಮುಖ್ಯ ರಸ್ತೆಯ ಡೆಪೋಡೀಲ್ಸ್ ಅಪಾರ್ಟ್ಮೆಂಟ್ ಮುಂಭಾಗ ರಸ್ತೆ   

ಪೀಣ್ಯ ದಾಸರಹಳ್ಳಿ: ಎಂಟನೇ ಮೈಲಿಯಿಂದ ಚಿಕ್ಕಬಾಣಾವರದ ಕಡೆಗೆ ತೆರಳುವ ಹೆಸರಘಟ್ಟ ಮುಖ್ಯ ರಸ್ತೆಯಲ್ಲಿ ವಾಹನಗಳ ವೇಗ ತಗ್ಗಿಸುವ ಉಬ್ಬುಗಳಿಲ್ಲ. ಇದರಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ.

ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಸದಾ ವಾಹನ ದಟ್ಟಣೆ ಇರುತ್ತದೆ. ಕೆಲವು ವಾಹನಗಳು ವೇಗವಾಗಿ ಸಾಗುತ್ತಿದ್ದು, ಸಾಕಷ್ಟು ಬಾರಿ ಅಪಘಾತಗಳು ಸಂಭವಿಸಿವೆ.

ವೇಗವಾಗಿ ಸಾಗುವ ವಾಹನಗಳು ರಸ್ತೆ ವಿಭಜಕವಿಲ್ಲದ ಕಡೆ ದಿಢೀರನೆ ತಿರುವು ತೆಗೆದುಕೊಳ್ಳುವ ಕಾರಣ, ವಾಹನ ಸಂಚಾರಕ್ಕೆ ತೊಂದರೆಯಾಗು ತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ADVERTISEMENT

‘ಡೆಫೊಡಿಲ್ಸ್‌ ಅಪಾರ್ಟ್‌ಮೆಂಟ್‌ ಹತ್ತಿರ ರಸ್ತೆ ವಿಭಜಕ ತೆರೆದಿರುವುದರಿಂದ ವೇಗವಾಗಿ ಬರುವ ವಾಹನಗಳು ಪ್ರತಿನಿತ್ಯ ರಸ್ತೆ ತಿರುವಿನಲ್ಲಿ ಅಪಘಾತಗಳು ಸಂಭವಿಸುತ್ತವೆ. ವಾರಕ್ಕೆ ಕನಿಷ್ಠ ಮೂರು ಅಪಘಾತಗಳು ಇಲ್ಲಿ ಸಂಭವಿಸುತ್ತಿವೆ. ಅಪಘಾತಗಳ ಸಿ.ಸಿ.ಟಿ.ವಿ ವಿಡಿಯೋ, ಫೋಟೋಸ್ ಕೂಡ ಇದೆ’ ಎಂದು ಡೆಫೊಡಿಲ್ಸ್ ಅಪಾರ್ಟ್‌ಮೆಂಟ್‌ ನಿವಾಸಿ ಸಂದೀಪ್ ಸಿಂಗ್ ಹೇಳಿದರು.

‘ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ರಸ್ತೆಯ ಎರಡು ಕಡೆ ವೈಜ್ಞಾನಿಕವಾಗಿ ರಸ್ತೆ ಉಬ್ಬುಗಳನ್ನು ಹಾಕಬೇಕು. ಈ ವಿಚಾರವಾಗಿ ಬೆಂಗಳೂರು ಉತ್ತರ ಸಂಚಾರ ಡಿಸಿಪಿ ಅವರಿಗೂ ಮನವಿ ಮಾಡಿದ್ದೇವೆ. ಯಾವುದೇ ಕ್ರಮ ಕೈಗೊಂಡಿಲ್ಲ. ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಿದರೂ ನಿರ್ಲಕ್ಷ ವಹಿಸಿದ್ದಾರೆ. ಅಗತ್ಯವಿರುವ ಕಡೆ ಕಡ್ಡಾಯವಾಗಿ ರಸ್ತೆ ಉಬ್ಬುಗಳನ್ನು ಹಾಕಬೇಕು' ಎಂದು  ಸಂದೀಪ್ ಸಿಂಗ್ ದೂರಿದರು.

ಸಾರ್ವಜನಿಕರ ಸಮಸ್ಯೆಗೆ ಪ್ರತಿಕ್ರಿಯಿಸಿದ ಚಿಕ್ಕಬಾಣಾವರ ಸಂಚಾರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕೇಶವಮೂರ್ತಿ ಎನ್.ಎನ್‌., ‘ಹೆಸರಘಟ್ಟ ಮುಖ್ಯ ರಸ್ತೆಯಲ್ಲಿ ಚರಂಡಿ ಮತ್ತು ರಸ್ತೆ ಕಾಮಗಾರಿ ನಡೆಯುತ್ತಿದೆ. ರಸ್ತೆ ವಿಭಜಕದ ತಿರುವಿನಲ್ಲಿ ವಿದ್ಯುತ್ ಇಲ್ಲದ ಕಾರಣ ಕತ್ತಲು ಇದೆ. ಡೆಫೊಡಿಲ್ಸ್‌ ಅಪಾರ್ಟ್‌ಮೆಂಟ್‌, ನರ್ಚರ್ ಸ್ಕೂಲ್, ಬೋನ್‌ಮಿಲ್, ಸಪ್ತಗಿರಿ ಜಂಕ್ಷನ್ ಮುಂಭಾಗದಲ್ಲಿ ಉಬ್ಬುಗಳನ್ನು ಹಾಕಲು ಸಂಚಾರ ವಿಭಾಗದ ಆಯುಕ್ತರ ಗಮನಕ್ಕೆ ತರಲಾಗಿದೆ' ಎಂದರು.

‘ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಆದಷ್ಟು ಬೇಗ ಕ್ರಮ ಕೈಗೊಳ್ಳುತ್ತೇವೆ' ಎಂದು ದಾಸರಹಳ್ಳಿ ವಲಯ ಜಂಟಿ ಆಯುಕ್ತ ಪ್ರೀತಂ ನಸಲಾಪುರೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.