ADVERTISEMENT

ಭಯೋತ್ಪಾದಕ ಕೃತ್ಯಕ್ಕೆ ಜೈಲಿನಲ್ಲಿ ಸಂಚು ಆರೋಪ; ಮೂವರು ಖುಲಾಸೆ: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 15:28 IST
Last Updated 10 ಅಕ್ಟೋಬರ್ 2024, 15:28 IST
ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್‌
ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್‌   

ಬೆಂಗಳೂರು: ‘ಜೈಲಿನಲ್ಲಿ ಇದ್ದುಕೊಂಡು ಭಯೋತ್ಪಾದನಾ ಕೃತ್ಯ ನಡೆಸಲು, ‘ಲಷ್ಕರ್‌-ಎ-ತಯಬಾ’ (ಎಲ್‌ಇಟಿ) ಸಂಘಟನೆ ಜತೆ ಸೇರಿ ಸಂಚು ರೂಪಿಸಿದ ಆರೋಪದ ಪ್ರಕರಣದಲ್ಲಿ ಒಬ್ಬ ಪಾಕಿಸ್ತಾನ ಪ್ರಜೆಯೂ ಸೇರಿದಂತೆ ಮೂವರನ್ನು ಹೈಕೋರ್ಟ್ ಖುಲಾಸೆಗೊಳಿಸಿದೆ.

‘ವಿಚಾರಣಾ ನ್ಯಾಯಾಲಯ 2023ರಲ್ಲಿ ನಮಗೆ ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ರದ್ದುಪಡಿಸಬೇಕು’ ಎಂದು ಕೋರಿ ಬೆಂಗಳೂರಿನ ಸೈಯದ್‌ ಅಬ್ದುಲ್‌ ರೆಹಮಾನ್‌ (36), ಚಿಂತಾಮಣಿಯ ಅಫ್ಸರ್‌ ಪಾಷಾ ಅಲಿಯಾಸ್‌ ಖುಸ್ರುದ್ದೀನ್‌ (43) ಮತ್ತು ಕರಾಚಿಯ ಮೊಹಮ್ಮದ್‌ ಫಹಾದ್‌ ಕೊಯಾ (30) ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಮತ್ತು ಜೆ.ಎಂ.ಖಾಜಿ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಪ್ರಾಸಿಕ್ಯೂಷನ್‌ ವಿಚಾರಣೆಗೆ ಪೂರ್ವಾನುಮತಿ ಪಡೆಯುವ ಪ್ರಕ್ರಿಯೆಯಲ್ಲಿನ ಲೋಪಗಳಿಂದಾಗಿ ಎಲ್ಲ ಅಪರಾಧಿಗಳನ್ನೂ ಖುಲಾಸೆಗೊಳಿಸಲಾಗುತ್ತಿದೆ’ ಎಂದು ನ್ಯಾಯಪೀಠ ಹೇಳಿದೆ.

ADVERTISEMENT

‘ತನಿಖೆ ವೇಳೆ ಸಂಗ್ರಹಿಸಲಾಗಿದ್ದ ದಾಖಲೆಗಳನ್ನು ಪರಿಶೀಲನಾ ಸಮಿತಿ ಮುಂದೆ ಸಲ್ಲಿಸಬೇಕಾಗಿರಲಿಲ್ಲ ಅಥವಾ ಆ ವರದಿಯನ್ನು ಉಲ್ಲೇಖಿಸಿದ್ದರೂ ಅದಕ್ಕೆ ಪೂರ್ವಾನುಮತಿ ನೀಡಬೇಕಾದ ಸಕ್ಷಮ ಪ್ರಾಧಿಕಾರದ ಮುಂದೆ ಅವುಗಳನ್ನು ಮಂಡಿಸಬೇಕಾಗಿರಲಿಲ್ಲ’ ಎಂದು ನ್ಯಾಯಪೀಠ ಹೇಳಿದೆ.

‘ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)-1967ರ ವಿವಿಧ ಕಲಂಗಳಡಿ ವಿಧಿಸಲಾಗಿರುವ ಶಿಕ್ಷೆ ಊರ್ಜಿತವಾಗುವುದಿಲ್ಲ. ಪಾಕಿಸ್ತಾನದ ಭಯೋತ್ಪಾದನಾ ಸಂಘಟನೆಗಳಿಗೆ ಯುವಕರನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಸಾಬೀತುಪಡಿಸುವ ಯಾವುದೇ ಅಂಶಗಳು ತನಿಖೆಯಲ್ಲಿ ಕಂಡು ಬಂದಿಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅಕ್ರಮವಾಗಿ ರಿವಾಲ್ವರ್‌ ಮತ್ತು ಸ್ಫೋಟಕ ವಸ್ತುಗಳನ್ನು ಹೊಂದಿದ್ದ ಆರೋಪದಡಿ ಕ್ರಮವಾಗಿ ಶಸ್ತ್ರಾಸ್ತ್ರ ಕಾಯ್ದೆ-1959 ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆ-1908ರ ಅಡಿಯಲ್ಲಿ ವಿಚಾರಣಾ ನ್ಯಾಯಾಲಯ ರೆಹಮಾನ್‌ಗೆ ಶಿಕ್ಷೆ ವಿಧಿಸಿರುವುದನ್ನು ನ್ಯಾಯಪೀಠ ಎತ್ತಿ ಹಿಡಿದಿದೆ.

ಇದೇ ವೇಳೆ, ‘ಮೊಹಮದ್ ಫಹಾದ್ ಕೊಯಾನನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಿ’ ಎಂದು ನ್ಯಾಯಪೀಠ ಆದೇಶಿಸಿದೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲ ಮೊಹಮದ್ ತಾಹಿರ್ ಮತ್ತು ರಾಜ್ಯ ಪ್ರಾಸಿಕ್ಯೂಷನ್ ಪರ ಹೆಚ್ಚುವರಿ ರಾಜ್ಯ ಪ್ರಾಸಿಕ್ಯೂಟರ್ ವಿಜಯಕುಮಾರ್ ಮಜಗೆ ವಾದ ಮಂಡಿಸಿದ್ದರು.

ಪ್ರಕರಣವೇನು?: ‘ಕ್ರಿಮಿನಲ್‌ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ವೇಳೆ ರೆಹಮಾನ್‌ ಹಾಗೂ ಇಬ್ಬರು ಸಹ ಕೈದಿಗಳು ಭಯೋತ್ಪಾದಕ ಸಂಘಟನೆ ಎಲ್‌ಇಟಿ ಜತೆ ಸೇರಿ ರಾಜ್ಯದ ಹಲವೆಡೆ ಭಯೋತ್ಪಾದಕ ದಾಳಿಗಳನ್ನು ನಡೆಸಲು 2012ರ ಮೇ 7ರಂದು ಸಂಚು ರೂಪಿಸಿದ್ದರು’ ಎಂಬ ಅರೋಪದಡಿ ಮೂವರೂ ಆರೋಪಿಗಳಿಗೆ ಸಿಟಿ ಸಿವಿಲ್ ನ್ಯಾಯಾಲಯದ 49ನೇ ಹೆಚ್ಚುವರಿ ವಿಶೇಷ ನ್ಯಾಯಾಲಯ 2023ರ ಫೆಬ್ರುವರಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.