ADVERTISEMENT

ಅನಗತ್ಯ ಸಂಚರಿಸಿದರೆ ವಾಹನ ಜಪ್ತಿ

ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 19:44 IST
Last Updated 21 ಏಪ್ರಿಲ್ 2021, 19:44 IST
ಕಮಲ್ ಪಂತ್
ಕಮಲ್ ಪಂತ್   

ಬೆಂಗಳೂರು:‘ಕೊರೊನಾ ನಿಯಂತ್ರಣಕ್ಕಾಗಿ ಮೇ 4ರವರೆಗೆ ನಗರದಾದ್ಯಂತ ಜಾರಿ ಮಾಡಿರುವ ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯದ ಕರ್ಫ್ಯೂ ವೇಳೆ ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಜಪ್ತಿ ಮಾಡಲಾಗುವುದು’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಎಚ್ಚರಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಕರ್ಫ್ಯೂ ಅವಧಿಯಲ್ಲಿ ಯಾವುದೇ ರೀತಿಯ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ. ಈ ವೇಳೆ ಸಂಚಾರಕ್ಕೆ ಪೊಲೀಸ್ ಇಲಾಖೆ ಯಾವುದೇ ಪಾಸ್ ವಿತರಿಸುವುದಿಲ್ಲ. ತುರ್ತು ಅಗತ್ಯ ಇದ್ದವರು ಗುರುತಿನ ಚೀಟಿ ಹಾಗೂ ಸಂಬಂಧಿತ ದಾಖಲೆ ತೋರಿಸಿ ಸಂಚರಿಸಬಹುದು. ಆದರೆ, ಅನಗತ್ಯವಾಗಿ ಸಂಚಾರಕ್ಕೆ ಮುಂದಾಗುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

‘ಕರ್ಫ್ಯೂ ವೇಳೆ ನಾಲ್ಕಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲವೂ ಬಂದ್ ಇರಲಿದೆ. ಮದುವೆಗೆ 50, ಅಂತ್ಯಕ್ರಿಯೆಗೆ 20 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಆಹಾರ ಸೇವನೆಗೆ ಅನುಮತಿ ಇಲ್ಲ. ಆಹಾರವನ್ನು ಪಾರ್ಸೆಲ್‌ ತೆಗೆದುಕೊಂಡು ಹೋಗಲು ಮಾತ್ರ ಅವಕಾಶ ಕಲ್ಪಿಸಲಾಗಿದೆ’ ಎಂದು ವಿವರಿಸಿದರು.

ADVERTISEMENT

ಕಲ್ಯಾಣ ಮಂಟಪ ಪರವಾನಗಿ ರದ್ದು:‘ಕಲ್ಯಾಣ ಮಂಟಪ ಹಾಗೂ ಪಾರ್ಟಿ ಹಾಲ್‌ಗಳಲ್ಲಿ ಶುಭ ಸಮಾರಂಭಗಳಿಗೆ ಜನರ ಪ್ರವೇಶ ನಿಗದಿಪಡಿಸಲಾಗಿದೆ. ಅಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಲೀಕರು ಹಾಗೂ ಆಯೋಜಕರ ಜೊತೆ ಸಭೆ ನಡೆಸಲಾಗುವುದು’.

‘ನಿಯಮ ಪಾಲನೆ ಕುರಿತು ಮಾಲೀಕರು ಕಡ್ಡಾಯವಾಗಿ ಬಾಂಡ್‌ ಮಾಡಿಸಬೇಕು. ಇದರ ಅನ್ವಯ ಕಾರ್ಯಕ್ರಮದಲ್ಲಿ ಏನೇ ಅನಾಹುತ ನಡೆದರೂ ಕಲ್ಯಾಣ ಮಂಟಪ ಹಾಗೂ ಪಾರ್ಟಿ ಹಾಲ್ ಮಾಲೀಕರೇ ಜವಾಬ್ದಾರರು. ಇದರಿಂದ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ನಿಯಮ ಉಲ್ಲಂಘಿಸುವ ಕಲ್ಯಾಣ ಮಂಟಪ ಹಾಗೂ ಹಾಲ್‌ಗಳನ್ನು ಜಪ್ತಿ ಮಾಡಿ, ಪರವಾನಗಿ ರದ್ದುಪಡಿಸಲಾಗುವುದು’ ಎಂದೂ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.