ADVERTISEMENT

ನಟ ದರ್ಶನ್ ಹಣ ತಿರಸ್ಕರಿಸಿದ ಪಶ್ಚಿಮ ವಿಭಾಗದ ಪೊಲೀಸರು

ಹುಟ್ಟುಹಬ್ಬದ ವೇಳೆ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2020, 23:16 IST
Last Updated 21 ಫೆಬ್ರುವರಿ 2020, 23:16 IST
ಹಲ್ಲೆಯಿಂದ ಗಾಯಗೊಂಡಿರುವ ಕಾನ್‌ಸ್ಟೆಬಲ್ ದೇವರಾಜ್ 
ಹಲ್ಲೆಯಿಂದ ಗಾಯಗೊಂಡಿರುವ ಕಾನ್‌ಸ್ಟೆಬಲ್ ದೇವರಾಜ್    

ಬೆಂಗಳೂರು: ನಟ ದರ್ಶನ್ ಹುಟ್ಟುಹಬ್ಬದ ಸಂದರ್ಭದಲ್ಲಿ ಜ್ಞಾನಭಾರತಿ ಠಾಣೆ ಕಾನ್‌ಸ್ಟೆಬಲ್ ಡಿ.ಆರ್.ದೇವರಾಜ್ ಮೇಲೆ ನಡೆದಿರುವ ಹಲ್ಲೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪಶ್ಚಿಮ ವಿಭಾಗದ ಪೊಲೀಸರು, ಚಿಕಿತ್ಸೆಗಾಗಿ ದರ್ಶನ್ ಪರವಾಗಿ ವ್ಯವಸ್ಥಾಪಕ ನೀಡಲು ಮುಂದಾಗಿದ್ದ ಹಣವನ್ನು ತಿರಸ್ಕರಿಸಿದ್ದಾರೆ.

ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ ಲೇಔಟ್‌ನಲ್ಲಿ ಇದೇ 15ರ ತಡರಾತ್ರಿ ಹಮ್ಮಿಕೊಂಡಿದ್ದ ಹುಟ್ಟುಹಬ್ಬದ ವೇಳೆ ಕೆಲ ಅಭಿಮಾನಿಗಳು ದೇವರಾಜ್ ಮುಖಕ್ಕೆ ಗುದ್ದಿದ್ದರು. ತೀವ್ರ ಗಾಯಗೊಂಡ ದೇವರಾಜ್ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ. ಈ ಚಿಕಿತ್ಸೆ ‘ಆರೋಗ್ಯ ಭಾಗ್ಯ’ ಯೋಜನೆ ವ್ಯಾಪ್ತಿಗೆ ಬರುವುದಿಲ್ಲ. ವಿಶೇಷ ಪ್ರಕರಣವೆಂದು ಪರಿಗಣಿಸಿ ಚಿಕಿತ್ಸಾ ವೆಚ್ಚವನ್ನು ಭರಿಸಲು ಪೊಲೀಸ್ ಹಿರಿಯ ಅಧಿಕಾರಿಗಳೇ ಕ್ರಮ ಕೈಗೊಂಡಿದ್ದಾರೆ.

ಇದರ ಮಧ್ಯೆಯೇ ಹಿರಿಯ ಅಧಿಕಾರಿಯನ್ನು ಸಂಪರ್ಕಿಸಿದ್ದ ದರ್ಶನ್ ಅವರ ವ್ಯವಸ್ಥಾಪಕ, ಚಿಕಿತ್ಸಾ ವೆಚ್ಚಕ್ಕಾಗಿ ₹2 ಲಕ್ಷ ನೀಡುವುದಾಗಿ ಹೇಳಿದ್ದರು. ಆತನನ್ನು ತರಾಟೆಗೆ ತೆಗೆದುಕೊಂಡ ಅಧಿಕಾರಿ, ‘ನಿಮ್ಮ ಬೇಜವಾಬ್ದಾರಿಯಿಂದಲೇ ನಮ್ಮ ಕುಟುಂಬದ ಸದಸ್ಯ ಆಸ್ಪತ್ರೆ ಸೇರಿದ್ದಾನೆ. ಹಣ ನೀಡಿದ ಮಾತ್ರಕ್ಕೆ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ‌’ ಎಂದು ತಿರುಗೇಟು ನೀಡಿ
ರುವುದಾಗಿ ಮೂಲಗಳು ತಿಳಿಸಿವೆ.

ADVERTISEMENT

‘ನಿಮ್ಮ ಹಣದ ಅವಶ್ಯಕತೆ ನಮಗಿಲ್ಲ. ನೀವು ಕಾನೂನು ಕ್ರಮ ಎದುರಿಸಲೇಬೇಕು’ ಎಂದು ಅಧಿಕಾರಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

*
ಕಾನ್‌ಸ್ಟೆಬಲ್‌ ಚಿಕಿತ್ಸಾ ವೆಚ್ಚಕ್ಕೆ ಹಣದ ಸಮಸ್ಯೆ ಇಲ್ಲ. ಇಲಾಖೆ ಅವರ ಜೊತೆಗಿದೆ. ದರ್ಶನ್‌ ವ್ಯವಸ್ಥಾಪಕರಿಗೂ ಅದನ್ನೇ ಹೇಳಿ, ಅವರು ನೀಡಲು ಮುಂದಾಗಿದ್ದ ಹಣ ತಿರಸ್ಕರಿಸಿದ್ದೇವೆ.
– ಬಿ.ರಮೇಶ್, ಪಶ್ಚಿಮ ವಿಭಾಗದ ಡಿಸಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.