ADVERTISEMENT

Pahalgam Terror Attack: ಉಗ್ರರ ದಾಳಿಗೆ ಆದಿಚುಂಚನಗಿರಿ ಶ್ರೀ ಖಂಡನೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 15:25 IST
Last Updated 23 ಏಪ್ರಿಲ್ 2025, 15:25 IST
ನಿರ್ಮಲಾನಂದನಾಥ ಸ್ವಾಮೀಜಿ
ನಿರ್ಮಲಾನಂದನಾಥ ಸ್ವಾಮೀಜಿ   

ಬೆಂಗಳೂರು: ಜಮ್ಮು–ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿರುವುದನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಖಂಡಿಸಿದ್ದಾರೆ.

ಘಟನೆಯಲ್ಲಿ ಮುಗ್ಧ ಜನರು ಸಾವನ್ನಪ್ಪಿರುವುದು ಅಘಾತ ತಂದಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬದವರಿಗೆ ಸಂತಾಪಗಳು. ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಸ್ವಾಮೀಜಿ ಹಾರೈಸಿದ್ದಾರೆ.

ದಾಳಿಯಲ್ಲಿ ರಾಜ್ಯದ ಮೂವರು ಸಾವನ್ನಪ್ಪಿರುವುದು ಅತ್ಯಂತ ದುರದೃಷ್ಟಕರ. ಮೃತರ ಕುಟುಂಬಗಳಿಗೆ ದುಃಖವನ್ನು ಭರಿಸುವ ಶಕ್ತಿ ಸಿಗಲಿ. ಇಂಥ ಸಂದರ್ಭದಲ್ಲಿ ಸಂತ್ರಸ್ತರ ಕುಟುಂಬದವರೊಂದಿಗೆ ಶ್ರೀಮಠ ಇರಲಿದೆ ಎಂದು ಭರವಸೆ ನೀಡಿದ್ದಾರೆ.

ADVERTISEMENT

ಒಂದು ಕಾಲದಲ್ಲಿ ಜಮ್ಮು–ಕಾಶ್ಮೀರ ಅಶಾಂತಿಯ ಬೀಡಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ನಿರ್ಧಾರಗಳಿಂದಾಗಿ ಕಳೆದ ಹಲವು ವರ್ಷಗಳಿಂದ ಕಣಿವೆ ರಾಜ್ಯದಲ್ಲಿ ಶಾಂತಿ ನೆಲಸಿತ್ತು. ಇದನ್ನು ಸಹಿಸದ ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

‘ಭಯೋತ್ಪಾದನೆಗೆ ಜಾತಿ ಮತ್ತು ಧರ್ಮದ ಬಣ್ಣ ಕಟ್ಟುವುದು ಬೇಡ. ಇದರಲ್ಲಿ ಯಾರೇ ಭಾಗಿಯಾಗಿದ್ದರೂ ಅದನ್ನು ನಾವು ಖಂಡಿಸಲೇಬೇಕು. ಪಕ್ಷ ರಾಜಕಾರಣ ಮರೆತು ಎಲ್ಲರೂ ಒಗ್ಗಟ್ಟಾಗಿರಬೇಕಾದ ಸಮಯ ಇದು’ ಎಂದು ಸಲಹೆ ನೀಡಿದ್ದಾರೆ.

‘ಇದು ಭಾರತದ ಸಾರ್ವಭೌಮತೆ ಮೇಲೆ ನಡೆದಿರುವ ದಾಳಿಯಾಗಿದೆ. ಉಗ್ರರನ್ನು ಮಟ್ಟಹಾಕಲು ಸರ್ಕಾರ ಏನೆಲ್ಲಾ ಸಾಧ್ಯವೋ ಅದನ್ನು ಮಾಡಬೇಕು. ನಾವೆಲ್ಲರೂ ಕೇಂದ್ರ ಸರ್ಕಾರಕ್ಕೆ ಸಹಕಾರ ನೀಡಬೇಕು. ನಾವು ಒಂದಾಗಿದ್ದೇವೆ ಎಂಬ ಸಂದೇಶವನ್ನು ರವಾನಿಸಲೇಬೇಕು’ ಎಂದು ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.