ADVERTISEMENT

ವಾಯುಪಡೆ ಬಲ ವೃದ್ಧಿಸಲಿದೆಯೇ ‘ಜಾಗ್ವಾರ್’?

ಎಚ್‌ಎಎಲ್‌ನಿಂದ ಹೊಸ ಯುದ್ಧ ವಿಮಾನ l ಗಮನ ಸೆಳೆಯುತ್ತಿದೆ ಡಿಆರ್‌ಡಿಒ ಮಳಿಗೆ

ಗಣಪತಿ ಶರ್ಮಾ
Published 23 ಫೆಬ್ರುವರಿ 2019, 10:54 IST
Last Updated 23 ಫೆಬ್ರುವರಿ 2019, 10:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (ಎಚ್‌ಎಎಲ್‌) ಯುದ್ಧವಿಮಾನದ ಜಾಗ್ವಾರ್ ಮ್ಯಾಕ್ಸ್ ಮಾದರಿ ಏರೋ ಇಂಡಿಯಾದ ವಸ್ತು ಪ್ರದರ್ಶನ ಮಳಿಗೆಯಲ್ಲಿ ಗಮನ ಸೆಳೆಯುತ್ತಿದೆ.

ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಈ ಮಾದರಿಯನ್ನು ಭಾರತೀಯ ವಾಯುಪಡೆಗೆಂದೇ ಅಭಿವೃದ್ಧಿಪಡಿಸಲಾಗಿದೆ. ಸದ್ಯ ಈ ಮಾದರಿಯ ಯುದ್ಧ ವಿಮಾನದ ತಯಾರಿಗಾಗಿ ವಾಯುಪಡೆಗೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಇದಕ್ಕೆ ಅನುಮೋದನೆ ದೊರೆತಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್‌ಎಎಲ್‌ ಮೂಲಗಳು ತಿಳಿಸಿವೆ.

ಅತ್ಯಾಧುನಿಕ ರೇಡಾರ್ ವಾರ್ನರ್ ಮತ್ತು ಲೊಕೇಟರ್, ಉಪಗ್ರಹ ಸಂವಹನ ವ್ಯವಸ್ಥೆ ಈ ವಿಮಾನದಲ್ಲಿರಲಿದೆ. ಎಲ್ಲ ರೀತಿಯ ಹವಾಮಾನದಲ್ಲಿ, ಹಗಲು, ರಾತ್ರಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಇದು ಹೊಂದಿರಲಿದೆ. ಗರಿಷ್ಠ 1,000 ಕಿಲೋ ತೂಕದ ಬಾಂಬ್, ಕ್ಷಿಪಣಿಗಳನ್ನು ಪ್ರಯೋಗಿಸಬಲ್ಲದು.

ADVERTISEMENT

ಹೆಲ್ಮೆಟ್ ಮೌಂಟೆಡ್ ಡಿಸ್ಪ್ಲೇ ಸಿಸ್ಟಂ, ವಾಯ್ಸ್ ಕಮಾಂಡ್ ಸಿಸ್ಟಂ, ಇನ್ಫ್ರಾರೆಡ್ ಸರ್ಚ್ ಮತ್ತು ಟ್ರ್ಯಾಕ್, ಫೈಟ್ ಮ್ಯಾನೇಜ್‌ಮೆಂಟ್ ವ್ಯವಸ್ಥೆಗಳು ಈ ವಿಮಾನದ ವಿಶೇಷವಾಗಿವೆ. ಆ್ಯಂಟಿ ಟ್ಯಾಂಕ್ ಸ್ಮಾರ್ಟ್ ಬಾಂಬ್‌ಗಳು, ಸ್ಮಾರ್ಟ್ ಕ್ರೂಸ್ ಮಿಸೈಲ್‌ಗಳು ಸೇರಿದಂತೆ ಸುಮಾರು ಹತ್ತರಷ್ಟು ಬಾಂಬ್, ಕ್ಷಿಪಣಿಗಳನ್ನು ಪ್ರಯೋಗ ಮಾಡುವ ಸಾಮರ್ಥ್ಯ ಜಾಗ್ವಾರ್ ಮ್ಯಾಕ್ಸ್‌ಗೆ ಇದೆ ಎಂದಿದೆ ಎಚ್‌ಎಎಲ್‌.

ಗಮನ ಸೆಳೆಯುತ್ತಿರುವಡಿಆರ್‌ಡಿಒ: ಗುಂಡುನಿರೋಧಕ ಜಾಕೆಟ್, ಹೆಲ್ಮೆಟ್‌ಗಳು; ಪೃಥ್ವಿ, ಆಕಾಶ್, ಅಸ್ತ್ರ ಸರಣಿಯ ಕ್ಷಿಪಣಿಗಳು, ರೇಡಾರ್‌, ಬಾಂಬ್‌ಗಳ ಮಾದರಿಗಳು, ಯುದ್ಧವಿಮಾನದ ಸಿಬ್ಬಂದಿಯ ರಕ್ಷಣೆಗೆ ಬೇಕಾದ ಅತ್ಯಾಧುನಿಕ ದಿರಿಸುಗಳು...

ಇವೆಲ್ಲ ಕಂಡುಬಂದದ್ದು ವೈಮಾನಿಕ ಪ್ರದರ್ಶನದ ಪ್ರಯುಕ್ತ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಆಯೋಜಿಸಿದ್ದ ಪ್ರದರ್ಶನ ಮಳಿಗೆಯಲ್ಲಿ.

ಸೇನೆಯ ಮೂರೂ ವಿಭಾಗಗಳ ಸಿಬ್ಬಂದಿಯ ಜೀವ ರಕ್ಷಣೆಗೆ ಮತ್ತು ಕಾರ್ಯಕ್ಷಮತೆ ವೃದ್ಧಿಗೆ ಬೇಕಾದ ಅನೇಕ ಅತ್ಯಾಧುನಿಕ ಸಲಕರಣೆಗಳನ್ನುಡಿಆರ್‌ಡಿಒ ಅಭಿವೃದ್ಧಿಪಡಿಸಿದೆ.

‘ಭಾರತೀಯ ಸೇನೆಯು ನಿಗದಿಪಡಿಸಿರುವ ತಾಂತ್ರಿಕ ಮಾನದಂಡಕ್ಕೆ ಅನುಗುಣವಾದ ಗುಂಡುನಿರೋಧಕ ಜಾಕೆಟ್‌ ಅನ್ನು ಅಭಿವೃದ್ಧಿಪಡಿಸುವಲ್ಲಿ ಡಿಆರ್‌ಡಿಒಯಶಸ್ವಿಯಾಗಿದೆ. ಇದು ಸೇನಾ ಸಿಬ್ಬಂದಿಯನ್ನು ಗುಂಡಿನ ದಾಳಿಯಿಂದ ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ. 80ರಿಂದ 89 ಸೆಂಟಿ ಮೀಟರ್ ಎದೆ ಅಳತೆಯ ಗಾತ್ರದಲ್ಲಿ ಲಭ್ಯವಿದ್ದು ಕತ್ತು, ಹೃದಯ, ಹೊಟ್ಟೆ ಸೇರಿದಂತೆ ದೇಹದ ಪ್ರಮುಖ ಭಾಗಗಳನ್ನು ಗುಂಡಿನ ದಾಳಿಯಿಂದ ರಕ್ಷಿಸಲಿದೆ’ ಎಂದು ಡಿಆರ್‌ಡಿಒ ಮೂಲಗಳು ತಿಳಿಸಿವೆ.

200 ಡ್ರೋನ್ ಖರೀದಿಗೆ ಕರಾರು
ಗುಪ್ತಚರ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲು ಭಾರತೀಯ ಸೇನೆಯು ಇಸ್ರೇಲ್‌ನ ‘ಸಿಯಾಂಟ್ ಸೊಲ್ಯುಷನ್ ಆ್ಯಂಡ್ ಸರ್ವಿಸ್’ ಸಂಸ್ಥೆಯಿಂದ 200 ಅತ್ಯಾಧುನಿಕ ಮಾನವರಹಿತ ವಾಯು ವಾಹನಗಳನ್ನು (ಯುಎವಿ) ಖರೀದಿಸಲು ಮುಂದಾಗಿದೆ.

‘ಭಾರತೀಯ ಸೇನೆಯು ‘ಸ್ಪೈಲೈಟ್’ ಕಂಪನಿಯ ಡ್ರೋನ್‌ಗಳನ್ನು ಖರೀದಿಸುವ ಸಂಬಂಧ ಮಾತುಕತೆ ನಡೆಸಿದೆ. 9.5 ಕೆ.ಜಿ ತೂಕದ ಈ ಡ್ರೋನ್‌ಗಳು, 80 ಕಿ.ಮೀ ವ್ಯಾಪ್ತಿಯವರೆಗೆ ಸಂಚರಿಸುತ್ತವೆ’ ಎಂದು ಕಂಪನಿಯ ಉಪ ನಿರ್ದೇಶಕ ಸಂಜಯ್ ಶರ್ಮಾ ಹೇಳಿದರು.

ಬೆಂಗಳೂರಲ್ಲಿ ಪೈಲಟ್ ತರಬೇತಿ ಕೇಂದ್ರ

‘20 ವರ್ಷಗಳಲ್ಲಿ ದೇಶಕ್ಕೆ 25,000 ಹೊಸ ಪೈಲಟ್‌ಗಳು ಬೇಕಾಗಬಹುದು. ಹೀಗಾಗಿ,. ಬೆಂಗಳೂರು ಮತ್ತು ದೆಹಲಿಯಲ್ಲಿ ತರಬೇತಿ ಕೇಂದ್ರಗಳನ್ನು ತೆರೆಯಲಾಗುವುದು’ ಎಂದು ‘ಏರ್‌ಬಸ್‌’ ಕಂಪನಿಯ ದಕ್ಷಿಣ ಏಷ್ಯಾ ಮತ್ತು ಭಾರತ ಘಟಕದ ಅಧ್ಯಕ್ಷ ಆನಂದ್ ಇ.ಸ್ಟ್ಯಾನ್ಲಿ ತಿಳಿಸಿದರು.

‘ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಉದಯೋನ್ಮುಖ ತಂತ್ರಜ್ಞಾನ’ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘10 ವರ್ಷಗಳಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ವಿಮಾನಗಳು ಹಾರಾಟ ನಡೆಸಲಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.