ADVERTISEMENT

₹14,700 ಕೋಟಿ ಹೂಡಿಕೆ– 10,600 ಉದ್ಯೋಗ ಸೃಷ್ಟಿ: ಬಿ.ಎಸ್‌.ಯಡಿಯೂರಪ್ಪ

ವೈಮಾಂತರಿಕ್ಷ ನೀತಿಯಿಂದ ಹೂಡಿಕೆಗೆ ಉತ್ತೇಜನ – ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 19:39 IST
Last Updated 3 ಫೆಬ್ರುವರಿ 2021, 19:39 IST
   

ಬೆಂಗಳೂರು: ‘ದೇಶದಲ್ಲಿ ವೈಮಾಂತರಿಕ್ಷ ನೀತಿ ರೂಪಿಸಿರುವ ಮೊದಲ ರಾಜ್ಯ ಕರ್ನಾಟಕ. ₹ 14,700 ಕೋಟಿ ಹೂಡಿಕೆಗೆ ಅವಕಾಶ ಕಲ್ಪಿಸುವ ಈ ನೀತಿ 10,600 ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

‘ಏರೊ ಇಂಡಿಯಾ 2021’ ವೈಮಾನಿಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಬುಧವಾರ ಮಾತನಾಡಿದ ಅವರು, ರಾಜ್ಯದಲ್ಲಿರುವ ಮೂಲಸೌಕರ್ಯ ಹಾಗೂ ಇಲ್ಲಿನ ವೈಮಾಂತರಿಕ್ಷ ನೀತಿಯಿಂದಾಗಿ ಇಲ್ಲಿ ಹೂಡಿಕೆಗೆ ಇರುವ ಅವಕಾಶಗಳನ್ನು ವಿವಿಧ ದೇಶಗಳ ರಾಜತಾಂತ್ರಿಕ ಪ್ರತಿನಿಧಿಗಳ ಮುಂದೆ ಬಿಚ್ಚಿಟ್ಟರು.

‘ರಕ್ಷಣೆ ಮತ್ತು ವೈಮಾಂತರಿಕ್ಷ ಕ್ಷೇತ್ರದ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿರುವ ಅನೇಕ ಸರ್ಕಾರಿ ಸಂಸ್ಥೆಗಳ ತವರು ಬೆಂಗಳೂರು. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಹಾಗೂ ನವೋದ್ಯಮಗಳಿಗೆ ಉತ್ತೇಜನ ನೀಡುವ ಕ್ರಿಯಾಶೀಲ ಸಂಸ್ಕೃತಿಯ ನಗರವಿದು. ದೇಶದಲ್ಲಿ ವೈಮಾಂತರಿಕ್ಷ ಕ್ಷೇತ್ರದ ರಫ್ತಿನಲ್ಲಿ ಶೇ 65ರಷ್ಟು ಪಾಲು ಕರ್ನಾಟಕದ್ದು. ರಕ್ಷಣಾ ಉದ್ದೇಶದ ವಿಮಾನ ಮತ್ತು ಹೆಲಿಕಾಪ್ಟರ್‌ಗಳ ಉತ್ಪಾದನಾಸೇವೆಗಳಲ್ಲಿ ಶೇ 67ರಷ್ಟು ಪಾಲು ನಮ್ಮ ರಾಜ್ಯದ್ದು. ಜಗತ್ತಿನಲ್ಲಿ ವೈಮಾಂತರಿಕ್ಷ ಕ್ಷೇತ್ರದಲ್ಲಿ ಅತಿ ಹೆಚ್ಚು ಬಂಡವಾಳ ಆಕರ್ಷಿಸುತ್ತಿರುವ ಮೂರು ಮುಂಚೂಣಿ ನಗರಗಳಲ್ಲಿ ಬೆಂಗಳೂರು ಕೂಡಾ ಒಂದು’ ಎಂದು ಅವರು ತಿಳಿಸಿದರು.

ADVERTISEMENT

‘ದೇವನಹಳ್ಳಿಯಲ್ಲಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಪಕ್ಕದಲ್ಲಿ 1 ಸಾವಿರ ಎಕರೆ ಪ್ರದೇಶದಲ್ಲಿ ಏರೊಸ್ಪೇಸ್‌ ಪಾರ್ಕ್‌ ನಿರ್ಮಿಸಲು ಸರ್ಕಾರ 2008ರಲ್ಲೇ ನಿರ್ಧಾರ ಕೈಗೊಂಡಿತ್ತು. ಕೆಐಎಎಲ್ ಪಕ್ಕದಲ್ಲಿ ರಾಜ್ಯ ಸರ್ಕಾರವು ವಿಮಾನ ನಿರ್ವಹಣಾ ಸೌಲಭ್ಯವನ್ನು ಹೊಂದಿದೆ. ಹಾಸನ ಮತ್ತು ಬೆಂಗಳೂರಿನಲ್ಲಿ ವಿಮಾನಗಳ ನಿರ್ವಹಣೆ, ದುರಸ್ತಿ ಹಾಗೂ ಕಾರ್ಯಾಚರಣಾ ಕೇಂದ್ರಗಳನ್ನು (ಎಂಆರ್‌ಒ) ಸ್ಥಾಪಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ’ ಎಂದು ಅವರು ತಿಳಿಸಿದರು.

ಸೆಪ್ಟೆಂಬರ್‌ನಲ್ಲಿ ಎಂಎಸ್‌ಎಂಇ ಎಕ್ಸ್‌ಪೊ

‘ಉದ್ಯೋಗ ಭಾರತಿ ಹಾಗೂ ಐಎಂಎಸ್‌ ಪ್ರತಿಷ್ಠಾನಗಳ ಸಹಭಾಗಿತ್ವದಲ್ಲಿ ಅತಿಸಣ್ಣ ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ) ಮತ್ತು ರಕ್ಷಣಾ ಪರಿಕರಗಳ ಪ್ರದರ್ಶನ ಮೇಳವನ್ನು (ಎಂಎಸ್‌ಎಂಇ ಎಕ್ಸ್‌ಪೊ) ಮುಂಬರುವ ಸೆ. 27ರಿಂದ 29ರವರೆಗೆ ಏರ್ಪಡಿಸಲು ನಿರ್ಧರಿಸಲಾಗಿದೆ’ ಎಂದು ಮುಖ್ಯಮಂತ್ರಿ ಪ್ರಕಟಿಸಿದರು.

ಈ ಮೇಳದ ಯಶಸ್ಸಿಗೆ ರಕ್ಷಣಾ ಇಲಾಖೆಯ, ವಿವಿಧ ರಾಜತಾಂತ್ರಿಕರ ಹಾಗೂ ಕಾರ್ಪೊರೇಟ್‌ ಕಂಪನಿಗಳ ಸಹಕಾರ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.