ADVERTISEMENT

ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಸೇವೆ ನೀಡಿ; ಸಚಿವ ಶರಣಪ್ರಕಾಶ್‌ ಪಾಟೀಲ ಕಿವಿಮಾತು

ಬೆಂಗಳೂರು ವೈದ್ಯಕೀಯ ಕಾಲೇಜಿನ ಘಟಿಕೋತ್ಸವ; ಸಚಿವ ಶರಣಪ್ರಕಾಶ್‌ ಪಾಟೀಲ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 14:06 IST
Last Updated 25 ನವೆಂಬರ್ 2025, 14:06 IST
   

ಬೆಂಗಳೂರು: ‘ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕೈಗೆಟುಕುವ ದರದಲ್ಲಿ ಶಿಕ್ಷಣ ಪಡೆದು ವೈದ್ಯರಾಗಿರುವವರು ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಿ ಸಮಾಜಮುಖಿಯಾಗಿ ಕೆಲಸ ಮಾಡಬೇಕು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಸಲಹೆ ನೀಡಿದರು.

ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸಮಾಜದ ಆರೋಗ್ಯ ಕಾಪಾಡುವಲ್ಲಿ ವೈದ್ಯರ ಪಾತ್ರ ಹಿರಿದು. ಅದರಲ್ಲೂ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶಿಕ್ಷಣ ಪಡೆದವರಿಗೆ ಇದರ ಮಹತ್ವ ಹೆಚ್ಚೇ ತಿಳಿದಿರುತ್ತದೆ. ಸಮಾಜಮುಖಿಯಾಗಿ ಕೆಲಸ ಮಾಡುವುದರ ಜೊತೆಗೆ ವೃತ್ತಿಪರತೆ, ಬದ್ದತೆ, ನೈತಿಕತೆ ಬೆಳೆಸಿಕೊಳ್ಳಬೇಕು‘ ಎಂದು ತಿಳಿಸಿದರು.

‘ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಇದರಿಂದಾಗಿ ವೃತ್ತಿಯಲ್ಲಿ ಜ್ಞಾನ, ಕೌಶಲ ಹೆಚ್ಚಿಸಿಕೊಳ್ಳುವುದು ಅನಿವಾರ್ಯ. ಭಾರತ ಮಾತ್ರವಲ್ಲದೇ ಹೊರ ದೇಶಗಳ ವೈದ್ಯಕೀಯ ಕ್ಷೇತ್ರದಲ್ಲಿ ಏನೇನು ಆಗುತ್ತಿದೆ ಎನ್ನುವುದನ್ನೂ ತಿಳಿದುಕೊಂಡರೆ ವೃತ್ತಿಯಲ್ಲಿ ಸಾಧನೆ ಮಾಡಲು ಸಹಕಾರಿಯಾಗಲಿದೆ’ ಎಂದು ಹೇಳಿದರು.

ADVERTISEMENT

ಕೃಪಾಂಕಕ್ಕೆ ಶಿಫಾರಸು:

ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಮಾತನಾಡಿ, ‘ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವ ವೈದ್ಯರಿಗೆ ಹೆಚ್ಚುವರಿಯಾಗಿ ಮಾಸಿಕ ₹50 ಸಾವಿರ ವೇತನ ನೀಡಬೇಕು. ನೀಟ್‌ ಪ್ರವೇಶ ಪರೀಕ್ಷೆಯಲ್ಲಿ ಕೃಪಾಂಕ ನೀಡಬೇಕು. ಜಿಲ್ಲಾ ಆಸ್ಪತ್ರೆಗಳಲ್ಲಿ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಆರಂಭಿಸಬೇಕು. ಇದನ್ನು ಸಂಸತ್ತಿನ ಆರೋಗ್ಯ ಸ್ಥಾಯಿ ಸಮಿತಿ ಮೂಲಕ ಸರ್ಕಾರಕ್ಕೆ ಶಿಫಾರಸು ಮಾಡಿದ್ದೇವೆ’ ಎಂದು ಹೇಳಿದರು.

‘ವೈದ್ಯಕೀಯ ಕ್ಷೇತ್ರದಲ್ಲೂ ಎಐ ಪ್ರವೇಶಿಸಿದೆ. ತಂತ್ರಜ್ಞಾನದ ಉಪಯೋಗವನ್ನು ವೈದ್ಯರು ಪಡೆದರೂ ಸ್ವಂತ ಜ್ಞಾನಕ್ಕೆ ಆದ್ಯತೆ ನೀಡಿ. ನಿಮ್ಮ ಮೆದುಳಿಗೆ ಕೆಲಸವೇ ಇಲ್ಲದ ಹಾಗೆ ಮಾಡಿಕೊಳ್ಳಬೇಡಿ. ಹಣದ ಹಿಂದೆ ಬೀಳದೇ ವೃತ್ತಿಯ ಹಿರಿಮೆ ಉಳಿಸಿ’ ಎಂದು ಕಿವಿಮಾತು ಹೇಳಿದರು.

ಶಾಸಕ ಉದಯ್‌ ಗರುಡಾಚಾರ್‌, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಡಾ.ಸುಜಾತಾ ರಾಥೋಡ್‌, ಕಾಲೇಜಿನ ಡೀನ್‌ ಡಾ.ಕಾವ್ಯ, ಪ್ರಾಂಶುಪಾಲರಾದ ಡಾ.ಅಸೀಮಾಬಾನು ಉಪಸ್ಥಿತರಿದ್ದರು.

ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಅವರ ವೇತನಕ್ಕೆ ಹೋಲಿಕೆ ಮಾಡಿಕೊಳ್ಳಬೇಡಿ. ವೈದ್ಯರು ಸಮಾಜಮುಖಿಯಾಗಿ ಕೆಲಸ ಮಾಡಿದರೆ ಹಣ ಕೀರ್ತಿ ಹುಡುಕಿಕೊಂಡು ಬರಲಿದೆ.
ಡಾ.ಸಿ.ಎನ್‌.ಮಂಜುನಾಥ್‌ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.