ಬೆಂಗಳೂರು: ‘ತ್ವರಿತ ನ್ಯಾಯ ಪ್ರಕ್ರಿಯೆಗೆ ಕೃತಕ ಬುದ್ಧಿಮತ್ತೆ (ಎ.ಐ )ಯಂತಹ ಉನ್ನತ ತಂತ್ರಜ್ಞಾನಗಳ ಬಳಕೆ ಅವಶ್ಯಕವಾಗಿದೆ. ಡಿಜಿಟಲ್ ನ್ಯಾಯಾಲಯಗಳೂ ಸ್ಥಾಪನೆಯಾಗಬೇಕಾಗಿದೆ’ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.
ಜ್ಞಾನಭಾರತಿ ಆವರಣದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಕಾನೂನು ಕಾಲೇಜು, ಕಾನೂನು ಅಧ್ಯಯನ ವಿಭಾಗ ಮತ್ತು ಸೊಸೈಟಿ ಆಫ್ ಮೂಟರ್ಸ್ ಆಯೋಜಿಸಿದ್ದ ‘29ನೇ ಆಲ್ ಇಂಡಿಯಾ ಮೂಟ್ ಕೋರ್ಟ್ ಸ್ಪರ್ಧೆ – 2025’ ಉದ್ಘಾಟಿಸಿ ಅವರು ಮಾತನಾಡಿದರು.
‘ಕಾಲಮಿತಿಯೊಳಗೆ ನೊಂದವರಿಗೆ ನ್ಯಾಯ ಒದಗಿಸಲು ನ್ಯಾಯಾಲಯಗಳು ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ’ ಎಂದರು.
‘ಮೂಟ್ ಕೋರ್ಟ್ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಹಂತದಲ್ಲಿಯೇ ನ್ಯಾಯಾಲಯದ ಪರಿಸರ, ವಾತಾವರಣ, ಕಾನೂನು ಪ್ರಕ್ರಿಯೆ, ವಾದ ಪ್ರತಿವಾದದ ಪರಿಚಯ ಮಾಡಿಸುತ್ತದೆ. ಕಾನೂನು ವಿದ್ಯಾರ್ಥಿಗಳಲ್ಲಿ ವಾದ ಕೌಶಲ, ನ್ಯಾಯತಂತ್ರ, ನ್ಯಾಯಾಲಯದ ಶಿಷ್ಟಾಚಾರ ಮತ್ತು ನೈತಿಕತೆಗಳನ್ನು ಬೆಳೆಸುವ ವೇದಿಕೆಯಾಗಿದೆ’ ಎಂದು ತಿಳಿಸಿದರು.
‘ದಶಕಗಳಿಂದ ನ್ಯಾಯಾಲಯಗಳಲ್ಲಿ 10 ಲಕ್ಷಕ್ಕೂ ಅಧಿಕ ಪ್ರಕರಣಗಳು ಬಾಕಿ ಉಳಿದಿವೆ. ವೇಗ ಮತ್ತು ಪರಿಣಾಮಕಾರಿ ನ್ಯಾಯ ಪ್ರಕ್ರಿಯೆಗೆ ಸಹಕಾರಿಯಾಗಲು, ಉತ್ತಮ ಸೌಲಭ್ಯಗಳೊಂದಿಗೆ ನ್ಯಾಯಾಲಯಗಳನ್ನು ಸ್ಥಾಪಿಸಬೇಕು, ವಕೀಲರ ತರಬೇತಿ ಅಕಾಡೆಮಿಗಳನ್ನು ಆರಂಭಿಸಬೇಕು ಮತ್ತು ಕಾಲಕ್ಕೆ ತಕ್ಕಂತೆ ಕಾನೂನು ವ್ಯವಸ್ಥೆಯನ್ನು ನವೀಕರಿಸಬೇಕು’ ಎಂದು ಸಲಹೆ ನೀಡಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಜಯಕರ ಎಸ್.ಎಂ. ಅವರು ಸರ್ಕಾರದ ಜನಪರ ಕಾನೂನು ಸುಧಾರಣೆಯನ್ನು ಶ್ಲಾಘಿಸಿದರು. ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ (ಗದಗ) ಕುಲಪತಿ ಪ್ರೊ. ಸುರೇಶ್ ವಿ. ನಾಡಗೌಡರ್ ಮಾತನಾಡಿದರು.
ಮೂರು ದಿನಗಳು ನಡೆಯುವ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ದೇಶದಾದ್ಯಂತ 40ಕ್ಕಿಂತ ಹೆಚ್ಚು ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಕಾನೂನು ಕಾಲೇಜಿನ ಪ್ರಾಚಾರ್ಯ ಪ್ರೊ.ಎನ್.ದಶರಥ್ , ಕಾನೂನು ನಿಕಾಯದ ಡೀನ್ ಪ್ರೊ. ವಿ. ಸುದೇಶ್, ಕಾನೂನು ವಿಭಾಗದ ಮುಖ್ಯಸ್ಥ ಎನ್. ಸತೀಶ್ ಗೌಡ, ಸಿ.ಆರ್.ಪಾಟೀಲ್ ಸೇರಿದಂತೆ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.