
ಬೆಂಗಳೂರು: ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ತನ್ನ 78 ಪಂಪಿಂಗ್ ಸ್ಟೇಷನ್‌ಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧಾರಿತ ಸ್ಮಾರ್ಟ್ ಪಂಪ್ ಮಾನಿಟರಿಂಗ್ ಹಾಗೂ ಆಪ್ಟಿಮೈಸೇಷನ್ ತಂತ್ರಜ್ಞಾನ ‘ಐಪಂಪ್‌ನೆಟ್’ ಅಳವಡಿಸಿಕೊಂಡಿದೆ.
ವಾರ್ಷಿಕವಾಗಿ ₹ 40 ಕೋಟಿಗೂ ಹೆಚ್ಚು ವಿದ್ಯುತ್ ವೆಚ್ಚವನ್ನು ಉಳಿತಾಯ ಮಾಡುವಂಥ ಹೊಸ ತಂತ್ರಜ್ಞಾನ ಇದಾಗಿದೆ. ಇಂತಹ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವಂತಹ ವಿಶ್ವದ ಮೊದಲ ನೀರು ಸರಬರಾಜು ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಮಂಡಳಿ ಪಾತ್ರವಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
‘ಐಪಂಪ್‌ನೆಟ್’ ಎನ್ನುವುದು ರಿಯಲ್-ಟೈಮ್ ಸೆನ್ಸರ್, ಕೃತಕ ಬುದ್ಧಿಮತ್ತೆ ಮತ್ತು ಮುನ್ಸೂಚನೆ ನೀಡುವ ತಂತ್ರಜ್ಞಾನಗಳ ಸಮ್ಮಿಲನವಾಗಿದೆ. ಸಾಂಪ್ರದಾಯಿಕ ವಿಧಾನಗಳಿಗಿಂತ ಭಿನ್ನವಾಗಿ, ಈ ವ್ಯವಸ್ಥೆಯು ಪಂಪ್‌ಗಳ ಕಾರ್ಯಕ್ಷಮತೆಯನ್ನು ನಿರಂತರವಾಗಿ ಪರಿಶೀಲಿಸುತ್ತದೆ. ಕಣ್ಣಿಗೆ ಕಾಣದ ನಷ್ಟವನ್ನು ಪತ್ತೆ ಹಚ್ಚುತ್ತದೆ. ಈಗಾಗಲೇ ಈ ವ್ಯವಸ್ಥೆಯು ನಿಗದಿಗಿಂತ ಹೆಚ್ಚು ವಿದ್ಯುತ್ ಬಳಸುತ್ತಿರುವ ಹಲವಾರು ಪಂಪ್‌ಗಳನ್ನು ಗುರುತಿಸಿದೆ. ಈ ಮಾಹಿತಿಯ ಆಧಾರದ ಮೇಲೆ, ಜಲಮಂಡಳಿಯು ಇಂಥ ಪಂಪ್‌ಗಳನ್ನು ಬದಲಾಯಿಸಿ, ಅಧಿಕ ದಕ್ಷತೆಯ ಪಂಪ್‌ಗಳನ್ನು ಅಳವಡಿಸುವ ಕಾರ್ಯವನ್ನು ಆರಂಭಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಆರ್ಥಿಕ ಲಾಭ ಮಾತ್ರವಲ್ಲದೆ, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಿ ಬೆಂಗಳೂರಿನ ಪರಿಸರ ಸುಸ್ಥಿರತೆಗೂ ಇದು ಕೊಡುಗೆ ನೀಡುತ್ತಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.