ADVERTISEMENT

ಕೋವಿಡ್ ಸಾವಿಗೆ ₹10 ಲಕ್ಷ ಪರಿಹಾರ: ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಮೇ 2021, 19:00 IST
Last Updated 18 ಮೇ 2021, 19:00 IST

ಬೆಂಗಳೂರು: ‘ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಕೋವಿಡ್‌ನಿಂದ ಮೃತಪಟ್ಟವರಿಗೆ ಸರ್ಕಾರ ತಲಾ ₹10 ಲಕ್ಷ ಪರಿಹಾರ ನೀಡಬೇಕು’ ಎಂದುಆಲ್‌ ಇಂಡಿಯಾ ಸೆಂಟ್ರಲ್‌ ಕೌನ್ಸಿಲ್‌ ಆಫ್‌ ಟ್ರೇಡ್‌ ಯೂನಿಯನ್‌ (ಎಐಸಿಸಿಟಿಯು) ರಾಜ್ಯ ಸಮಿತಿ ಆಗ್ರಹಿಸಿದೆ.

‘ಕಾರ್ಮಿಕರು ಮತ್ತು ಕೋವಿಡ್ ಎರಡನೇ ಅಲೆ’ ಕುರಿತುಎಐಸಿಸಿಟಿಯು ಮಂಗಳವಾರ ಆಯೋಜಿಸಿದ್ದ ಆನ್‌ಲೈನ್ ಕಾರ್ಯಕ್ರಮದಲ್ಲಿ ಕೋವಿಡ್ ಸಂದರ್ಭದಲ್ಲಿ ತುರ್ತಾಗಿ ಈಡೇರಬೇಕಿರುವ ಬೇಡಿಕೆಗಳ ವರದಿ ಮಂಡಿಸಲಾಯಿತು.

‘ಕಾರ್ಮಿಕರು ವಾಸಿಸುವ ಸ್ಥಳಗಳಲ್ಲಿ ಸರ್ಕಾರ ಸುರಕ್ಷಿತ ವಾತಾವರಣ ಕಲ್ಪಿಸಬೇಕು. ಕಾರ್ಮಿಕ ವರ್ಗಕ್ಕೆ ಬೇಕಾದ ಕೋವಿಡ್ ಕೇಂದ್ರಗಳು, ಆಮ್ಲಜನಕ, ವೆಂಟಿಲೇಟರ್, ಹಾಸಿಗೆ ಸೇರಿದಂತೆ ವೈದ್ಯಕೀಯ ವ್ಯವಸ್ಥೆ ಮಾಡಬೇಕು. ಕಾರ್ಮಿಕರು ವಾಸಿಸುವ ಸ್ಥಳಗಳಿಗೆ ತೆರಳಿ, ಕೊರೊನಾ ಲಸಿಕೆ ನೀಡಬೇಕು ಹಾಗೂ ಹೋಂ ಕ್ವಾರಂಟೈನ್ ಕಿಟ್‌ಗಳನ್ನು ವಿತರಿಸಬೇಕು’ ಎಂದು ಒತ್ತಾಯಿಸಿದೆ.

ADVERTISEMENT

‘ಲಾಕ್‌ಡೌನ್ ಅವಧಿಯಲ್ಲಿ ಪೂರ್ಣವೇತನ ನೀಡದ ಹಾಗೂ ಕಾರ್ಮಿಕರನ್ನು ಕೆಲಸಗಳಿಂದ ತೆಗೆದು ಹಾಕಿರುವ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಗುತ್ತಿಗೆ ಕಾರ್ಮಿಕರು, ಗುಡಿ ಕೈಗಾರಿಕೆಯವರು, ಬೀದಿಬದಿ ವ್ಯಾಪಾರಿಗಳು, ಕಟ್ಟಡ ಕಾರ್ಮಿಕರು , ಮಲ ಸ್ವಚ್ಛಗೊಳಿಸುವವರು ಸೇರಿದಂತೆ ಎಲ್ಲ ಅಸಂಘಟಿತ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು’.

‘ಕಾರ್ಮಿಕ ಇಲಾಖೆಯು ಇಂತಹ ನೊಂದವರ ದೂರುಗಳನ್ನು ಸ್ವೀಕರಿಸಲು ಹಾಗೂ ಪರಿಹಾರ ಸೂಚಿಸಲು ಸಹಾಯವಾಣಿ ಆರಂಭಿಸಬೇಕು. ಕೋವಿಡ್ ಪರಿಸ್ಥಿತಿಯಲ್ಲೂ ಅನಿವಾರ್ಯವಾಗಿ ಕೆಲಸ ನಿರ್ವಹಿಸುತ್ತಿರುವ ಮುಂಚೂಣಿ ಯೋಧರಿಗೆ ಅಪಾಯ ಭತ್ಯೆಯಾಗಿ ₹10 ಸಾವಿರ ನೀಡಬೇಕು’.

‘ಎಲ್ಲರಿಗೂ ತಲಾ 10 ಕೆ.ಜಿ ಪಡಿತರ ವಿತರಿಸಬೇಕು. ಇಂದಿರಾ ಕ್ಯಾಂಟೀನ್ ಜೊತೆಗೆ ಪರ್ಯಾಯವಾಗಿ ಆಹಾರ ವಿತರಣಾ ಮಾರ್ಗಗಳನ್ನು ಅನುಸರಿಸಬೇಕು. ಆಹಾರ ಸಮಸ್ಯೆ ನೀಗಿಸಲು ಸಹಾಯವಾಣಿ ಆರಂಭಿಸಬೇಕು’ ಎಂದೂ ಒತ್ತಾಯಿಸಿದೆ. \

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.