ADVERTISEMENT

ಬೆಂಗಳೂರು| ಕಲುಷಿತಗೊಳ್ಳುತ್ತಿದೆ ವಾತಾವರಣ: ಐಎಫ್‌ಎಸ್ ಅಧಿಕಾರಿ ಶ್ರೀನಿವಾಸುಲು

ಐಎಫ್‌ಎಸ್ ಅಧಿಕಾರಿ ಶ್ರೀನಿವಾಸುಲು ಕಳವಳ *ವೇದಾ ಮನೋಹರ ಕುರಿತ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2023, 16:23 IST
Last Updated 2 ಜುಲೈ 2023, 16:23 IST
ಕಾರ್ಯಕ್ರಮದಲ್ಲಿ ಶ್ರೀನಿವಾಸುಲು (ಎಡದಿಂದ ಮೂರನೆಯವರು) ಅವರು ‘ಪಂಚಮವೇದ’ ಮತ್ತು ‘ವೇದ’ ಪುಸ್ತಕವನ್ನು ಬಿಡುಗಡೆ ಮಾಡಿದರು. (ಎಡದಿಂದ) ಲೇಖಕ ಹರ್ಷ.ಡಿ.ಎನ್, ಆರ್.ಸಿ. ಜಗದೀಶ, ಕಮಲಾ ಹಂಪನಾ, ವೇದಾ ಮನೋಹರ ಮಸ್ಕಿ, ‘ಪ್ರಾಫಿಟ್ ಪ್ಲಸ್’ ಮಾಸಪತ್ರಿಕೆ ಸಂಪಾದಕಿ ಸುಧಾ ಶರ್ಮ ಚವತ್ತಿ ಮತ್ತು ಲೇಖಕಿ ಭಾರತಿ ಹೆಗಡೆ ಇದ್ದಾರೆ. –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಶ್ರೀನಿವಾಸುಲು (ಎಡದಿಂದ ಮೂರನೆಯವರು) ಅವರು ‘ಪಂಚಮವೇದ’ ಮತ್ತು ‘ವೇದ’ ಪುಸ್ತಕವನ್ನು ಬಿಡುಗಡೆ ಮಾಡಿದರು. (ಎಡದಿಂದ) ಲೇಖಕ ಹರ್ಷ.ಡಿ.ಎನ್, ಆರ್.ಸಿ. ಜಗದೀಶ, ಕಮಲಾ ಹಂಪನಾ, ವೇದಾ ಮನೋಹರ ಮಸ್ಕಿ, ‘ಪ್ರಾಫಿಟ್ ಪ್ಲಸ್’ ಮಾಸಪತ್ರಿಕೆ ಸಂಪಾದಕಿ ಸುಧಾ ಶರ್ಮ ಚವತ್ತಿ ಮತ್ತು ಲೇಖಕಿ ಭಾರತಿ ಹೆಗಡೆ ಇದ್ದಾರೆ. –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಬದಲಾದ ಪರಿಸ್ಥಿತಿಯಲ್ಲಿ ಇಡೀ ವಾತಾವರಣ ಕಲುಷಿತಗೊಳ್ಳುತ್ತಿದೆ. ದಿನನಿತ್ಯ ನಾವು ಬಳಸುವ ತರಕಾರಿಗಳೂ ವಿಷಕಾರಿಯಾಗುತ್ತಿವೆ’ ಎಂದು ಎಂದು ಐಎಫ್‌ಎಸ್ ಅಧಿಕಾರಿ ಶ್ರೀನಿವಾಸುಲು ಕಳವಳ ವ್ಯಕ್ತಪಡಿಸಿದರು.

ಬೆನಕ ಬುಕ್ಸ್‌ ಬ್ಯಾಂಕ್ ಹಾಗೂ ಎಲ್.ಬಿ.ಎಸ್‌ ಪ್ರಕಾಶನ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತಿ ಹೆಗಡೆ ಅವರ ‘ಪಂಚಮವೇದ’ ಹಾಗೂ ಹರ್ಷ ಡಿ.ಎನ್. ಅವರ ‘ವೇದ’ ಪುಸ್ತಕ ಬಿಡುಗಡೆ ಮಾಡಿ, ಮಾತನಾಡಿದರು. 

‘ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಪೋಷಿತ ತರಕಾರಿಗಳು ಅನಾರೋಗ್ಯಕ್ಕೆ ಆಹ್ವಾನ ನೀಡುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಸಾವಯವ ವಿಧಾನದ ಮೂಲಕ ಸ್ವಯಂ ಕೃಷಿಯತ್ತ ಹೊರಳಬೇಕು. ಈ ವಿಧಾನದ ಮೂಲಕ ಬೆಳೆದ ಬೆಳೆಗಳು ಆರೋಗ್ಯ ವೃದ್ಧಿಗೆ ಪೂರಕವಾಗಿರುತ್ತವೆ. ಇದರಿಂದ ಪರಿಸರವನ್ನೂ ರಾಸಾಯನಿಕದಿಂದ ಮುಕ್ತಗೊಳಿಸಲು ಬೆಂಬಲ ಸಿಗುತ್ತದೆ’ ಎಂದು ಹೇಳಿದರು. 

ADVERTISEMENT

ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಆರ್.ಸಿ. ಜಗದೀಶ, ‘ಕೃಷಿ ವಿಶ್ವವಿದ್ಯಾಲಯಗಳ ಪಠ್ಯಗಳಲ್ಲಿ ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಸಿಗಬೇಕು. ಇಲ್ಲವಾದಲ್ಲಿ ಕೃಷಿ ಕ್ಷೇತ್ರದ ವಾಸ್ತವ ವಿದ್ಯಾರ್ಥಿಗಳಿಗೆ ಪರಿಚಯ ಆಗುವುದಿಲ್ಲ. ವೇದಾ ಮನೋಹರ್ ಅವರು ತಾವು ವಾಸವಿರುವ ಪ್ರದೇಶದಲ್ಲಿ ಸಾವಯವ ಕೃಷಿಯನ್ನು ಪ್ರಯೋಗ ಶಾಲೆಯಂತೆ ರೂಪಿಸಿದ್ದಾರೆ. ಹೀಗಾಗಿ, ನಮ್ಮಲ್ಲಿನ ವಿದ್ಯಾರ್ಥಿಗಳನ್ನೂ ಅವರ ತೋಟಗಳಿಗೆ ಕರೆದೊಯ್ಯಲಾಗುತ್ತದೆ. ಕೃಷಿ ಭೂಮಿಯಲ್ಲಿ ಕೆಲಸ ಮಾಡಿ, ಯಶಸ್ಸು ಸಾಧಿಸಿದವರು ನಿಜವಾದ ಸಾಧಕರು. ಅಂತಹವರ ಕುರಿತ ಪುಸ್ತಕ ವಿದ್ಯಾರ್ಥಿಗಳಿಗೆ ಪಠ್ಯವಾಗಬೇಕು’ ಎಂದರು. 

ಸಾಹಿತಿ ಕಮಲಾ ಹಂಪನಾ, ‘ವೇದಾ ಮನೋಹರ ಅವರು ಭದ್ರಾವತಿ ಸಮೀಪ ತಮ್ಮ ಶ್ರಮದಿಂದ ಒಂದು ತೋಟ ಮಾಡಿ, ಅನೇಕ ಕನಸುಗಳನ್ನು ಬಿತ್ತಿ ಬೆಳೆಯುತ್ತಿದ್ದಾರೆ. ಇವರು ಇತರರನ್ನು ಕಾರ್ಯತತ್ಪರನ್ನಾಗಿ ಮಾಡಿ, ದುಡಿದು ಉಣ್ಣುವ ದಾರಿಯನ್ನು ತೋರಿಸುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಲೇಖಕಿ ಭಾರತಿ ಹೆಗಡೆ, ‘ಕನ್ನಡದಲ್ಲಿ ಆತ್ಮಕಥನಗಳು ಕಡಿಮೆ ಸಂಖ್ಯೆಯಲ್ಲಿವೆ. ಅದರಲ್ಲೂ ಮಹಿಳೆಯರ ಆತ್ಮಕಥನಗಳು ನಿರೀಕ್ಷಿತ ಪ್ರಮಾಣದಲ್ಲಿಲ್ಲ. ಮಹಿಳೆಯರ ಆತ್ಮಕಥನ ಕಟ್ಟಿಕೊಡುವುದು ಅಪರೂಪದ ಕೆಲಸವಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.