ADVERTISEMENT

ಏರೋ ಇಂಡಿಯಾ: ವಿದೇಶಿ ಯುದ್ಧ ವಿಮಾನಗಳ ಗರ್ಜನೆ

ಏರೋ ಇಂಡಿಯಾ: ಮೊದಲ ಬಾರಿಗೆ ಅಮೆರಿಕದ ‘ಎಫ್‌–35’ ಚಮತ್ಕಾರ l ಇದು ವಿಶ್ವದ ಮಾರಕ ಯುದ್ಧವಿಮಾನ

ಅದಿತ್ಯ ಕೆ.ಎ.
Published 15 ಫೆಬ್ರುವರಿ 2023, 6:52 IST
Last Updated 15 ಫೆಬ್ರುವರಿ 2023, 6:52 IST
US War Jet
US War Jet   

ಬೆಂಗಳೂರು: ‘ಏರೋ ಇಂಡಿಯಾ 2023’ರಲ್ಲಿ ಮಂಗಳವಾರ ವಿದೇಶಿ ಯುದ್ಧ ವಿಮಾನಗಳು, ಬಾನಂಗಳದಲ್ಲಿ ಚಮತ್ಕಾರ ಮಾಡಿದವು. ಅವುಗಳು ಆಗಸದಲ್ಲಿ ಮೋಡಿಯೊಂದಿಗೆ ಕಸರತ್ತು ನಡೆಸಿದವು. ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದವು.

ಮೊದಲ ದಿನ ಭಾರತದ ಯುದ್ಧ ವಿಮಾನಗಳು ಹಾಗೂ ಹೆಲಿಕಾಪ್ಟರ್‌ ಗಳು ಪ್ರದರ್ಶನ ನೀಡಿದ್ದವು. 2ನೇ ದಿನ ವಿದೇಶಿ ಯುದ್ಧ ವಿಮಾನಗಳು ತಮ್ಮ ಕಾರ್ಯಕ್ಷಮತೆ, ದಕ್ಷತೆ, ಕರಾರುವಕ್ಕಾಗಿ ಹಾರಾಟ ನಡೆಸಿದವು. ವೈಮಾನಿಕ ಪ್ರದರ್ಶನಕ್ಕೆ ಮತ್ತಷ್ಟು ಮೆರುಗು ತುಂಬಿದವು.

ಏರೋ ಇಂಡಿಯಾದ ಮೊದಲ ಬಾರಿಗೆ ಭಾಗಿಯಾಗಿರುವ ಅಮೆರಿಕದ ಸೂಪರ್‌ಸಾನಿಕ್‌ ಬಹುಮಾದರಿಯ ‘ಎಫ್‌–35’ ಯುದ್ಧ ವಿಮಾನವು ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಸಾಮರ್ಥ್ಯ ತೋರಿತು. ಅಮೆರಿಕದ ಅಲಾಸ್ಕ ಮತ್ತು ಉತಾಹ್‌ ವಾಯುನೆಲೆಯಿಂದ ಬಂದಿದ್ದ ಎರಡು ಎಫ್‌–35 ವಿಮಾನಗಳು ನೀಲಾಕಾಶದಲ್ಲಿ ಗರ್ಜಿಸುತ್ತ ಸಾಗಿದವು. ನೆರೆದಿದ್ದ ಸಾವಿರಾರು ಪ್ರೇಕ್ಷಕರನ್ನು ಮನಸೂರೆಗೊಳಿಸಿದವು. ಇದನ್ನು ವಿಶ್ವದ ಅತ್ಯಂತ ಮಾರಕ ಯುದ್ಧ ವಿಮಾನ ಎಂದೇ ಕರೆಯಲಾಗುತ್ತಿದೆ.

ADVERTISEMENT

ಎಫ್‌ 35 ಜತೆಗೇ ಬಂದಿದ್ದ ಅಮೆರಿಕದ ಎಫ್‌–16 ಸಹ ಪ್ರೇಕ್ಷಕರ ಮೈನವಿರೇಳಿಸುವಂತೆ ಪ್ರದರ್ಶನ ನೀಡಿತು. ಬಹು ಆಯಾಮದಲ್ಲಿ ಪ್ರದರ್ಶನ ನೀಡಿ ಆಕರ್ಷಿಸಿತು. ಯಲಹಂಕ ಬಳಿಯ ಶುಭ್ರ ಆಕಾಶದಲ್ಲಿ ವಿದೇಶಿ ಪೈಲೆಟ್‌ಗಳ ಕರಾಮತ್ತು ಮೈನವಿರೇಳಿಸಿತು.

ಅದಾದ ಮೇಲೆ ರಫೇಲ್‌ ಸಹ ಸದ್ದು ಮಾಡುತ್ತಾ ಸಾಗಿತು. ಅವುಗಳಿಂದ ಹೊಮ್ಮುತ್ತಿದ್ದ ಶಬ್ದವು ಮೈನಡುಗಿಸಿತು.
ಭಾರತದ ಹಳೇ ಡಕೋಟ ವಿಮಾನ 2ನೇ ದಿನ ಹಾರಾಟ ನಡೆಸಿ, ತನ್ನ ಸಾಮರ್ಥ್ಯ ತೋರಿತು. ಅದಾದಮೇಲೆ ಎಚ್‌ಎಎಲ್‌ನ ಲಘು ಯುದ್ಧ ವಿಮಾನಗಳೂ ನಭಕ್ಕೆ ಜಿಗಿದು ತಮ್ಮ ತಾಕತ್ತು ತೋರಿದವು. ಎಸ್‌ಯು 30, ಸುಖೋಯ್‌ ಸಹ ವೇಗದಲ್ಲಿ ಮುನ್ನುಗಿದವು.

ಕರಾರುವಾಕ್ಕಾದ ಪ್ರದರ್ಶನಕ್ಕೆ ಹೆಸರಾದ ಸೂರ್ಯಕಿರಣ್‌ ತಂಡವು ಮತ್ತೊಮ್ಮೆ ಆಕರ್ಷಿಸಿತು. ಯುದ್ಧ ವಿಮಾನ ಹಿಂಬಾಲಿಸಿದ ಸೂರ್ಯಕಿರಣ್‌ಗಳು ಶಿಸ್ತಿನಿಂದ ಸಾಗಿದವು. ಆಕಾಶದಲ್ಲಿಯೇ ಧೂಮದಲ್ಲಿ ಹೃದಯಾಕಾರದ ಚಿತ್ರ ಬಿಡಿಸಿದವು. ಸಾರಂಗ್‌ ಸಹ ಸಾಹಸ ತೋರಿತು.

‘ಅಮೆರಿಕದ ಎಫ್‌–35 ಈ ಬಾರಿಯ ಆಕರ್ಷಣೆಯಾಗಿದೆ. ಭಾರತಕ್ಕೆ ಮೊದಲ ಬಾರಿಗೆ ಬಂದಿದ್ದು, ಅದನ್ನು ಭಾರತವು ಖರೀದಿಸಲೂಬಹುದು. ಈ ಬೆಳವಣಿಗೆ ಶತ್ರು ರಾಷ್ಟ್ರಕ್ಕೆ ನಡುಕ ಹುಟ್ಟಿಸಿದೆ’ ಎಂದು ಏರೋ ಇಂಡಿಯಾಕ್ಕೆ ಬಂದಿದ್ದ ಗೋಪಾಲಕೃಷ್ಣ ಹೇಳಿದರು.

ಮಂಗಳವಾರ ವಿಮಾನಗಳು ನಿಲುಗಡೆಯಾದ ಸ್ಥಳದ ಬಳಿಗೆ ಉದ್ದಿಮೆದಾರರು, ಹೂಡಿಕೆದಾರರು ಹಾಗೂ ಪ್ರೇಕ್ಷಕರನ್ನು ಬಿಡಲಾಗಿತ್ತು. ಆಕಾಶದಲ್ಲಿ ಚತುರತೆ ತೋರಿ ಬಂದ ವಿಮಾನಗಳನ್ನು ಹತ್ತಿರದಿಂದಲೇ ಕಣ್ತುಂಬಿಕೊಂಡ ನಂತರ ಅವರೆಲ್ಲರೂ ಫೋಟೊ ಕ್ಲಿಕ್ಕಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.