ADVERTISEMENT

ಹುತಾತ್ಮ ಪೈಲಟ್‌ಗೆ ವಿಮಾನ ನಮನ!

ಸಾರಂಗದ ವೈಯ್ಯಾರಕ್ಕೆ ಮನಸೋತ ಪ್ರೇಕ್ಷಕ

ಎಂ.ಸಿ.ಮಂಜುನಾಥ
Published 21 ಫೆಬ್ರುವರಿ 2019, 18:53 IST
Last Updated 21 ಫೆಬ್ರುವರಿ 2019, 18:53 IST

ಬೆಂಗಳೂರು: ‘ಸಾರಂಗ’ದ ವೈಯ್ಯಾರಕ್ಕೆ ಪ್ರತಿಯಾಗಿ ‘ರುದ್ರ’ನ ರೌದ್ರಾವತಾರ. ಆಗಸದಲ್ಲಿ ಯುದ್ಧ ವಿಮಾನಗಳ ಗುಡುಗಿನ ಸದ್ದು. ಮೋಡ ಸೀಳಿಕೊಂಡು ಹೀರೊ ರೀತಿಯಲ್ಲಿ ಎಂಟ್ರಿ ಕೊಟ್ಟ ‘ಸುಖೋಯ್’. ತನ್ನ ಮೊನಚು ಮೂತಿಯಿಂದ ಆಕಾಶವನ್ನೇ ಚುಚ್ಚುತ್ತಿದ್ದ ರಫೇಲ್. ಇಷ್ಟೆಲ್ಲ ಅಬ್ಬರಗಳ ಕೊನೆಗೆ ಹುತಾತ್ಮ ಪೈಲಟ್‌ಗೆ ‘ತೇಜಸ್’ನಿಂದ ಭಾವಪೂರ್ಣ ಶ್ರದ್ಧಾಂಜಲಿ...

‘ಏರೋ–ಇಂಡಿಯಾ’ ವೈಮಾನಿಕ ಪ್ರದರ್ಶನದ ಮೊದಲ ದಿನವಾದ ಬುಧವಾರ, ಹುತಾತ್ಮ ಪೈಲಟ್ ಸಾಹಿಲ್ ಗಾಂಧಿಗೆ (ಮಂಗಳವಾರ ತಾಲೀಮು ನಡೆಸುವಾಗ ಮೃತಮಟ್ಟವರು) ಗಣ್ಯರು ಮಾತ್ರ ಕಂಬನಿ ಮಿಡಿಯಲಿಲ್ಲ. ಅವರ ಜತೆಗೆ ಕೆಲ ವಿಮಾನಗಳೂ ತಮ್ಮದೇ ಶೈಲಿಯಲ್ಲಿ ಗೌರವ ನಮನ ಸಲ್ಲಿಸಿದವು.

ಅಬ್ಬರದಿಂದಲೇ ವಾಯುನೆಲೆಗೆ ಬಂದ ರುದ್ರ, ತೇಜಸ್, ರಫೇಲ್, ಎಲ್‌ಯುಎಚ್ ವಿಮಾನಗಳು ಕಸರತ್ತು ಮುಗಿಸುವ ಮುನ್ನ ಕೆಲ ಕಾಲ ಆಗಸದಲ್ಲೇ ಮೌನಾಚರಣೆ ಆಚರಿಸಿದವು. ಸದ್ದು ಮಾಡದೆ, ಹೆಚ್ಚು ಹೊಗೆಯನ್ನೂ ಉಗುಳದೆ, ಮೆಲ್ಲಗೆ ಒಂದು ಸುತ್ತು ಹೊಡೆದು ರನ್‌ವೇಗೆ ಇಳಿದವು. ‘ತೇಜಸ್’ ಹೊಗೆಯಲ್ಲೇ ಹೃದಯದ ಚಿತ್ತಾರ ಬಿಡಿಸಿ, ಸಾಹಿಲ್‌ಗೆ ಹೃದಯಪೂರ್ವಕ ವಿದಾಯ ಹೇಳಿತು.

ADVERTISEMENT

ಹಾಕ್‌, ಎಚ್‌ಟಿಟಿ ಹಾಗೂ ಡಾರ್ನಿಯರ್ ವಿಮಾನಗಳು ‘ಮಿಸ್ಸಿಂಗ್‌ ಮ್ಯಾನ್‌’ ಸಂಯೋಜನೆ ಮೂಲಕ ನಮನ ಸಲ್ಲಿಸಿದರೆ, ರಫೇಲ್ ತನ್ನ ಎಂದಿನ ಅಬ್ಬರವನ್ನು ಪಕ್ಕಕ್ಕಿಟ್ಟು 150 ಕಿ.ಮೀ ವೇಗದಲ್ಲೇ ಸಾಗಿತು. ಆಗ ಮೈಕ್‌ನಲ್ಲಿ ‘ಜೈ ಹಿಂದ್ ವಿಂಗ್ ಕಮಾಂಡರ್ ಸಾಹಿಲ್ ಸಿಂಗ್’ ಎಂಬ ಕೂಗೆಬ್ಬಿತು.

‘ಸೂರ್ಯ’ನಿಲ್ಲದ ನಭ: ಪ್ರದರ್ಶನಕ್ಕೆ ಆಯ್ಕೆಯಾಗಿದ್ದ ಒಟ್ಟು 63 ವಿಮಾನಗಳು ಜಗತ್ತಿನ ಕಣ್ಣೇ ಬೆಂಗಳೂರಿನ ಕಡೆಗೆ ಹೊರಳುವಂತೆ ಮಾಡಿದ್ದವು. ಆದರೆ, ಪ್ರದರ್ಶನದಲ್ಲಿ ಅವಕಾಶ ಕಳೆದುಕೊಂಡಿದ್ದ ‘ಸೂರ್ಯಕಿರಣ’ ವಿಮಾನಗಳು ಮಾತ್ರ ವಾಯುನೆಲೆಯಲ್ಲಿ ಅನಾಥವಾಗಿ ನಿಂತಿದ್ದವು. ನಭದಲ್ಲಿ ‘ಸೂರ್ಯ’ನಿಲ್ಲದ ಕಾರಣ ಕೆಲವರು ಕೊಂಚ ಬೇಸರದಲ್ಲೇ ಪ್ರದರ್ಶನ ವೀಕ್ಷಿಸಿದರು.

ಮುದ್ದಾಡಿ ಗುದ್ದಾಡಿದ ‘ಸಾರಂಗ’ಗಳು!: ‘ವಾಯುನೆಲೆಯ ಸ್ಪೀಕರ್‌ಗಳಲ್ಲಿ ದೇಶಭಕ್ತಿಯ ಸಂಗೀತ ಮೊಳಗುತ್ತಿದ್ದಂತೆಯೇ ವಿಂಗ್ ಕಮಾಂಡರ್ ಸಚಿನ್ ಆನಂದ್ ಖದ್ರಿ ನೇತೃತ್ವದಲ್ಲಿ ಒಂದು ಮೂಲೆಯಿಂದ ಹಾರಿ ಬಂದ ನಾಲ್ಕು ಸಾರಂಗಗಳು, ಅಭಿಮಾನಿಗಳ ಮನದಲ್ಲಿ ಸಂತಸದ ಕಿಚ್ಚನ್ನು ಹಚ್ಚಿದವು. ಅವು ನಡೆಸಿದ ‘ಲೆವೆಲ್ ಕ್ರಾಸ್’, ‘ಸ್ಪ್ಲಿಟ್ ಶಾಟ್’, ‘ಮಿರರ್ ರಿಫ್ಲೆಕ್ಷನ್’ ಕಸರತ್ತುಗಳು ಮೈನವಿರೇಳಿಸಿದವು.

ನಾಲ್ಕೂ ಸಾರಂಗಗಳು ಮೊದಲು ಒಟ್ಟಿಗೇ ಬಾನಿಗೆ ಹಾರಿ ಮುದ್ದಾಡಿದವು. ಆದರೆ, ‘ಲೆವೆಲ್ ಕ್ರಾಸ್ ಸ್ಟಾರ್ಟ್’ ಎಂದು ಮೈಕ್‌ನಲ್ಲಿ ಕೂಗುತ್ತಿದ್ದಂತೆಯೇ ಎರಡೆರಡು ಬೇರೆ ಬೇರೆ ದಿಕ್ಕಿಗೆ ತೆರಳಿದವು. ನಂತರ ಒಂದನ್ನೊಂದು ಗುರಾಯಿಸಿಕೊಳ್ಳುತ್ತ ಗುದ್ದಾಟಕ್ಕೆ ನುಗ್ಗುವವರಂತೆ ಎದುರು–ಬದುರಾದವು. ವೇಗವಾಗಿ ಬಂದು ಇನ್ನೇನೂ ಡಿಕ್ಕಿ ಹೊಡೆದುಕೊಂಡವು ಎನ್ನುವಷ್ಟರಲ್ಲಿ, ತಪ್ಪಿಸಿಕೊಂಡು ಹೊಗೆ ಸೂಸುತ್ತ ಬೇರೆ ಬೇರೆ ದಿಕ್ಕಿಗೆ ಹೊರಟು ಹೋದವು. ಹೀಗೆ ಅಷ್ಟೂ ಹೊತ್ತು ಕೌತುಕದಲ್ಲಿ ಕೂರಿಸಿದ್ದ ಸಾರಂಗಗಳನ್ನು, ಜನ ಶಿಳ್ಳೆ–ಚಪ್ಪಾಳೆಗಳ ಮೂಲಕ ಬೀಳ್ಕೊಟ್ಟರು.

ಬಾಲ ತಿರುಗಿಸಿದ ರುದ್ರ: ಎಚ್‌ಎಎಲ್ 2017ರಲ್ಲಿ ಅಭಿವೃದ್ಧಿಪಡಿಸಿರುವ ‘ರುದ್ರ’ ವಿಮಾನವು, ಆಗಸದ ಪುಸ್ತಕಕ್ಕೆ ಹೊಗೆಯಿಂದಲೇ ತನ್ನ ಸಹಿ ಹಾಕಿತು. ಕಸರತ್ತಿನ ಕೊನೆಯಲ್ಲಿ ಏನೋ ಸಂದೇಶ ಹೇಳುವವನಂತೆ ಎತ್ತರಕ್ಕೆ ಹೋದ ರುದ್ರ, ಏನೂ ಹೇಳದೆ ಬಾಲ ತಿರುಗಿಸಿ (ಟೇಲ್ ಟರ್ನರ್) ನೋಡುಗರಿಗೆ ಅಣಕ ಮಾಡಿಬಿಟ್ಟ.

ಎಲ್‌ಯುಎಚ್ ನಾಟ್ಯ: ಬೆಂಗಳೂರು ‘ಎಚ್‌ಎಎಲ್‌’‍ ಕುಟುಂಬಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಲಘು ಹೆಲಿಕಾಪ್ಟರ್ (ಎಲ್‌ಯುಎಚ್), ವೇಗವಾಗಿ ಹಾರಿ ಒಮ್ಮೆಲೆ ಆಗಸದಲ್ಲೇ ನಿಂತುಕೊಂಡಿತು. ಅದು ಸ್ವಲ್ಪವೂ ಅಲುಗಾಡದಿರುವುದನ್ನು ಕಂಡು, ‘ಏನಾಯಿತಪ್ಪ ಇದಕ್ಕೆ’ ಎಂದು ಜನ ಗುಸು ಗುಸು ಶುರು ಮಾಡಿದರು. ಕೊನೆಗೆ ‘ಮಹಾನ್ ನರ್ತಕಿ’ಯಂತೆ ಸೊಂಟ ಕುಣಿಸಲು ಶುರು ಮಾಡಿದ ಎಲ್‌ಯುಎಚ್, ನಿಂತಲ್ಲೇ ನಾಟ್ಯವಾಡಿತು. ಆಗ ಎಲ್ಲರೂ ಕೇಕೆ ಹಾಕಿದರು.

ಮಳಿಗೆಗಳಿಗೆ ಮಿಲಿಟರಿ ಮಂದಿ
‘ರೆಕ್ಕೆ ಬಡಿಯದ ಹಕ್ಕಿ’ಗಳ ಕಸರತ್ತನ್ನು ಹತ್ತಿರದಿಂದ ನೋಡಲು ಜನಸಾಮಾನ್ಯರಿಗೆ ಈ ಪ್ರದರ್ಶನ ವೇದಿಕೆಯಾದರೆ, ಸೇನಾ ಮಂದಿಗೆ ತಮ್ಮ ಬತ್ತಳಿಕೆಗೆ ಮತ್ತೆ ಯಾವ ಹೊಸ ಅಸ್ತ್ರ ಕೂಡಲಿದೆ ಎನ್ನುವ ಕೌತುಕದ ಕೇಂದ್ರವಾಗಿತ್ತು. ಸೈನಿಕರು ವಿವಿಧ ದೇಶಗಳ ಪ್ರದರ್ಶನ ಮಳಿಗೆಗಳಿಗೆ ತೆರಳಿ ಯುದ್ಧ ಸಲಕರಣೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದರು.

ಮತ್ತೆ ‘ಡಕೋಟಾ’
1947ರಿಂದ 1971ರ ವರೆಗೆ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿದ್ದ ‘ಡಕೋಟಾ’ ರಾಜಗಾಂಭೀರ್ಯದಿಂದ ಸಾಗಿ ಬಂತು. 1947ರ ಕಾಶ್ಮೀರ ವಿಮೋಚನಾ ಯುದ್ಧ, 1962ರ ಇಂಡೋ–ಚೀನಾ ಯುದ್ಧ ಹಾಗೂ 1971ರ ಬಾಂಗ್ಲಾ ವಿಮೋಚನಾ ಯುದ್ಧಗಳಲ್ಲಿ ಪಾಲ್ಗೊಂಡಿತ್ತು. ಗುಜರಿ ಸೇರಿದ್ದ ಈ ವಿಮಾನ 2011ರಲ್ಲಿ ಮತ್ತೆ ವಾಯುಪಡೆಗೆ ಸೇರಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.