ADVERTISEMENT

ಮೆಟ್ರೊ ನಿಲ್ದಾಣಗಳಲ್ಲಿ ‘ನಂದಿನಿ’ಗೆ ಅವಕಾಶ ನೀಡಿ: ಸಿಪಿಎಂ

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 16:06 IST
Last Updated 19 ಜೂನ್ 2025, 16:06 IST
ಸಿಪಿಎಂ
ಸಿಪಿಎಂ   

ಬೆಂಗಳೂರು: ‘ನಮ್ಮ ಮೆಟ್ರೊ’ ನಿಲ್ದಾಣಗಳಲ್ಲಿ ಕರ್ನಾಟಕ ಹಾಲು ಮಹಾ ಮಂಡಳದ(ಕೆಎಂಎಫ್‌) ‘ನಂದಿನಿ’ ಮಳಿಗೆಗಳನ್ನು ತೆರೆಯಲು ಅವಕಾಶ ಮಾಡಿಕೊಡಬೇಕು ಎಂದು ಸಿಪಿಎಂ ಒತ್ತಾಯಿಸಿದೆ.

‘ನಂದಿನಿ’ ಗುಣಮಟ್ಟದ ವೈವಿಧ್ಯಮಯ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಿ ಜನಮನ್ನಣೆ ಗಳಿಸಿದೆ. ಸಣ್ಣ ಮತ್ತು ಅತಿಸಣ್ಣ ಹೈನುಗಾರರಿಂದ ಪ್ರತಿದಿನ ಒಂದು ಕೋಟಿ ಲೀಟರ್‌ಗಿಂತ ಅಧಿಕ ಹಾಲು ಸಂಗ್ರಹ ಮಾಡುತ್ತಿರುವ ಕೆಎಂಎಫ್‌, ಮಾರುಕಟ್ಟೆಗೆ ಬೆಂಗಳೂರನ್ನೇ ಹೆಚ್ಚು ಅವಲಂಬಿಸಿದೆ. ಆದರೆ, ಈಗ ಮೆಟ್ರೊ ನಿಲ್ದಾಣಗಳಲ್ಲಿ ಅಮೂಲ್‌ ಉತ್ಪಾದನೆಗಳ ಮಾರಾಟ ಮಳಿಗೆ ತಲೆ ಎತ್ತುತ್ತಿದೆ ಎಂದು ಸಿಪಿಎಂ ರಾಜ್ಯ ಮಂಡಳಿ ಕಾರ್ಯದರ್ಶಿ ಕೆ. ಪ್ರಕಾಶ್‌ ತಿಳಿಸಿದ್ದಾರೆ.

ಪ್ರತೀ ರಾಜ್ಯವು ತನ್ನದೇ ಆದ ಹಾಲು ಸಹಕಾರ ಒಕ್ಕೂಟವನ್ನು ಹೊಂದಿದೆ. ಕೆಲವು ರಾಜ್ಯಗಳು ಕೊರತೆಯನ್ನು, ಕೆಲವು ರಾಜ್ಯಗಳು ಮಿಗತೆಯನ್ನು ಹೊಂದಿವೆ. ಇಂಥ ಸಂದರ್ಭದಲ್ಲಿ ಪರಸ್ಪರ ಮಾರುಕಟ್ಟೆಯನ್ನು ಕಸಿಯುವ ಅನಾರೋಗ್ಯಕರ ಪೈಪೋಟಿ ನಿವಾರಿಸಲು ಈ ಹಿಂದೆ ಕ್ರಮ ಕೈಗೊಳ್ಳಲಾಗಿತ್ತು. ರಾಷ್ಟ್ರೀಯ ಹೈನುಗಾರಿಕಾ ಅಭಿವೃದ್ಧಿ ಮಂಡಳಿ(ಎನ್‌ಡಿಡಿಬಿ) ಮೂಲಕ ಹೆಚ್ಚುವರಿ ಹಾಲು ಲಭ್ಯ ಇರುವ ಸಹಕಾರಿ ಒಕ್ಕೂಟಗಳಿಂದ ಹಾಲು ಪಡೆದು ಕೊರತೆ ಇರುವ ರಾಜ್ಯಗಳಲ್ಲಿ ಆ ರಾಜ್ಯದ ಅಲ್ಲಲ್ಲಿನ ಬ್ರ್ಯಾಂಡ್ ಹೆಸರಲ್ಲೇ ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗುತ್ತಿತ್ತು. ಆ ಮೂಲಕ ಸಹಕಾರ ಒಕ್ಕೂಟಗಳು ಪರಸ್ಪರ ಅನಾರೋಗ್ಯಕರ ಪೈಪೋಟಿಗೆ ಅವಕಾಶ ಇಲ್ಲದಂತೆ ನೋಡಿಕೊಳ್ಳಲಾಗುತ್ತಿತ್ತು ಎಂದು ಅವರು ವಿವರಿಸಿದ್ದಾರೆ.

ADVERTISEMENT

ಟೆಂಡರ್‌ ಪ್ರಕ್ರಿಯೆಯಲ್ಲಿ ಅಮೂಲ್‌ ಭಾಗವಹಿಸಿದ್ದು, ಕೆಎಂಎಫ್‌ ಭಾಗವಹಿಸಿಲ್ಲ ಎಂದಾದರೆ ಇದಕ್ಕೆ ಹೊಣೆ ಯಾರು? ಟೆಂಡರ್‌ ಹಾಕದಿರಲು ಕಾರಣವೇನು ಎಂಬುದನ್ನು ಬಹಿರಂಗಪಡಿಸಿಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.