ADVERTISEMENT

ನೌಕರಿ ಆಮಿಷ ₹ 9.79ಲಕ್ಷ ಪಂಗನಾಮ!

ಅಮೆರಿಕದಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ, ನಕಲಿ ಇ–ಮೇಲ್ ಸೃಷ್ಟಿಸಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 19:36 IST
Last Updated 2 ಮಾರ್ಚ್ 2020, 19:36 IST

ಬೆಂಗಳೂರು: ಅಮೆರಿಕದಲ್ಲಿ ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿದ್ದ ವಂಚಕನೊಬ್ಬ ನಗರದ ಮಹಿಳೆಯೊಬ್ಬರಿಂದ ₹9.79 ಲಕ್ಷ ಪಡೆದು ವಂಚಿಸಿದ್ದು, ಈ ಸಂಬಂಧಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

‘ವಂಚನೆ ಬಗ್ಗೆ ಮಹಿಳೆ ದೂರು ನೀಡಿದ್ದಾರೆ. ಆರೋಪಿಗಳಾದ ರೈಮಂಡ್ ಕ್ಯಾಂಪೆಲ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಮಹಿಳೆ, ‘ನೌಕರಿ ಡಾಟ್ ಕಾಮ್’ ಜಾಲತಾಣಗಳಲ್ಲಿ ಹೆಸರು ನೋಂದಾಯಿಸಿಕೊಂಡು ರೆಸ್ಯುಮ್‌ ಅಪ್‌ಲೋಡ್ ಮಾಡಿದ್ದರು.ರೈಮಂಡ್ ಕ್ಯಾಂಪೆಲ್ ಹೆಸರು ಹೇಳಿಕೊಂಡು ಮಹಿಳೆಗೆ ಕರೆ ಮಾಡಿದ್ದ ಆರೋಪಿ, ‘ಅಮೆರಿಕದಲ್ಲಿರುವ ಡೆವನ್ ಎನರ್ಜಿ ಕಾರ್ಪೊರೇಷನ್‌ನಲ್ಲಿ ಉದ್ಯೋಗಿ ಕೊಡಿಸುತ್ತೇನೆ’ ಎಂದು ಹೇಳಿದ್ದ. ಕಂಪನಿ ಹೆಸರಿನಲ್ಲಿ ಇ–ಮೇಲ್ ಹಾಗೂ ವಾಟ್ಸ್‌ಆ್ಯಪ್ ಮೂಲಕವೂ ಸಂದೇಶ ಕಳುಹಿಸಿದ್ದ.’

ADVERTISEMENT

‘ಉದ್ಯೋಗ ಪಡೆಯಲು ಶುಲ್ಕ ಗಳನ್ನು ಪಾವತಿಸುವಂತೆ ಆರೋಪಿ ಹೇಳಿದ್ದ. ಅದನ್ನು ನಂಬಿದ್ದ ಮಹಿಳೆ, ಆರೋಪಿ ನೀಡಿದ್ದ ಬ್ಯಾಂಕ್‌ ಖಾತೆಗಳಿಗೆ ₹ 9.79 ಲಕ್ಷ ಜಮೆ ಮಾಡಿದ್ದರು. ಅದಾದ ನಂತರ ಆರೋಪಿ ಉದ್ಯೋಗ ಕೊಡಿಸದೇ ನಾಪತ್ತೆಯಾಗಿದ್ದಾನೆ‍.’

‘ಆರೋಪಿ, ನಕಲಿ ಇ–ಮೇಲ್ ಸೃಷ್ಟಿಸಿ ಮಹಿಳೆಯನ್ನು ವಂಚಿಸಿದ್ದಾನೆ’ ಎಂದು ಮೂಲಗಳು ತಿಳಿಸಿವೆ.

ಬ್ಯಾಂಕ್‌ ಮಹಿಳಾ ಉದ್ಯೋಗಿಗೆ ವಂಚನೆ
ವಿದೇಶದಿಂದ ಪಾರ್ಸೆಲ್ ಬಂದಿರುವುದಾಗಿ ಹೇಳಿ ಬ್ಯಾಂಕ್ ಮಹಿಳಾ ಉದ್ಯೋಗಿಯೊಬ್ಬರಿಂದ₹ 49,900 ಪಡೆದು ವಂಚಿಸಲಾಗಿದ್ದು, ಈ ಸಂಬಂಧಹಲಸೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ವಂಚನೆ ಸಂಬಂಧ ಚಾರುಲತಾ ಎಂಬುವರು ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘2019ರ ಮೇ 16ರಂದು ರವೀಂದ್ರ ಎಂಬ ಹೆಸರು ಹೇಳಿಕೊಂಡು ಕರೆ ಮಾಡಿದ್ದ ಆರೋಪಿ, ವಿದೇಶದಿಂದ ಪಾರ್ಸೆಲ್ ಬಂದಿರುವುದಾಗಿ ಹೇಳಿದ್ದ. ಅದನ್ನು ಬಿಡುಗಡೆ ಮಾಡಲು ಕಸ್ಟಮ್ಸ್ ಶುಲ್ಕ ಭರಿಸುವಂತೆ ತಿಳಿಸಿದ್ದ. ಅದನ್ನು ನಂಬಿದ್ದ ದೂರುದಾರರು, ಆರೋಪಿ ಹೇಳಿದ್ದ ಖಾತೆಗೆ ₹ 49,900 ಜಮೆ ಮಾಡಿದ್ದರು.’

‘ಅದಾದ ನಂತರ ಪಾರ್ಸೆಲ್ ಬಂದಿರಲಿಲ್ಲ. ಪುನಃ ಕರೆ ಮಾಡಿದ್ದ ಆರೋಪಿ ಮತ್ತೆ ₹ 2.30 ಲಕ್ಷ ಜಮೆ ಮಾಡುವಂತೆ ಹೇಳಿದ್ದ. ಅವಾಗಲೇ ದೂರುದಾರರಿಗೆ ಆರೋಪಿಯ ವಂಚನೆ ಅರಿವಿಗೆ ಬಂದಿದೆ’ ಎಂದು ಮೂಲಗಳು ಹೇಳಿವೆ.

ಮೊಬೈಲ್ ಆರ್ಡರ್ ಮಾಡಿ ₹1.71 ಲಕ್ಷ ಕಳೆದುಕೊಂಡರು
‘ಇಂಡಿಯಾ ಕಾರ್ಟ್’ ಜಾಲತಾಣದಲ್ಲಿ ಮೊಬೈಲ್ ಆರ್ಡರ್ ಮಾಡಿದ್ದ ಮಹಿಳೆಯೊಬ್ಬರು, ನಿಗದಿತ ಸಮಯಕ್ಕೆ ಮೊಬೈಲ್ ಬರದಿದ್ದರಿಂದ ವಿಚಾರಿಸಲು ಹೋಗಿ ₹1.71 ಲಕ್ಷ ಕಳೆದುಕೊಂಡಿದ್ದಾರೆ.

ಈ ಸಂಬಂಧ ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಆರ್ಡರ್ ಮಾಡಿ ಹಲವು ದಿನವಾದರೂ ಮೊಬೈಲ್ ಬಂದಿರಲಿಲ್ಲ. ಆ ಬಗ್ಗೆ ವಿಚಾರಿಸಲೆಂದು ಸಹಾಯವಾಣಿಗೆ ಕರೆ ಮಾಡಿದ್ದೆ. ಪ್ರತಿನಿಧಿ ಸೋಗಿನಲ್ಲಿ ಮಾತನಾಡಿದ್ದ ಆರೋಪಿ, ನನ್ನ ಬ್ಯಾಂಕ್ ಖಾತೆ ಹಾಗೂ ವಿಳಾಸ ಕೇಳಿ ತಿಳಿದುಕೊಂಡಿದ್ದ. ನಂತರ, ಮೊಬೈಲ್‌ಗೆ ಒಟಿಪಿ (ಒನ್ ಟೈಂ ಪಾಸ್‌ವರ್ಡ್‌) ಬಂದಿತ್ತು. ಅದನ್ನೂ ಆರೋಪಿ ಪಡೆದುಕೊಂಡಿದ್ದ. ಅದಾದ ನಂತರ, ನನ್ನ ಖಾತೆಯಿಂದ ₹1.71 ಲಕ್ಷ ಬೇರೊಂದು ಖಾತೆಗೆ ವರ್ಗಾವಣೆ ಆಗಿದೆ. ಆರೋಪಿಯೇ ಈ ಕೃತ್ಯ ಎಸಗಿದ್ದಾನೆ‍’ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.