ADVERTISEMENT

ಠಾಣೆಯಿಂದ ಅಮೂಲ್ಯಾ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 20:23 IST
Last Updated 27 ಫೆಬ್ರುವರಿ 2020, 20:23 IST

ಬೆಂಗಳೂರು: ದೇಶದ್ರೋಹ ಆರೋಪದಡಿ ಬಂಧಿಸಲಾಗಿರುವ ಅಮೂಲ್ಯಾ ಲಿಯೋನಾ (19) ಅವರನ್ನು ಬಸವೇಶ್ವರನಗರ ಠಾಣೆಯಿಂದ ಅಜ್ಞಾತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಅವರನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ಇತ್ತೀಚೆಗಷ್ಟೇ ಕಸ್ಟಡಿಗೆ ಪಡೆದಿರುವ ಪೊಲೀಸರು, ಬಸವೇಶ್ವರನಗರ ಠಾಣೆಯಲ್ಲಿರುವ ವಿಶೇಷ ಕೊಠಡಿಯಲ್ಲಿ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದಾರೆ. ಗುರುವಾರ ರಾತ್ರಿಯೇ ಅವರನ್ನು ಪೊಲೀಸ್ ವಾಹನದಲ್ಲಿ ಠಾಣೆಯಿಂದ ಕರೆದೊಯ್ಯಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿಯೊಬ್ಬರು, ‘ಇದೊಂದು ಸೂಕ್ಷ್ಮ ಪ್ರಕರಣ. ಆರೋಪಿಯಿಂದ ಸಾಕಷ್ಟು ಮಾಹಿತಿ ಪಡೆಯಲಾಗಿದ್ದು, ಅದರ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿಯನ್ನು ಕೆಲ ಸ್ಥಳಗಳಿಗೂ ಕರೆದೊಯ್ದು ಮಾಹಿತಿ ಪಡೆಯುತ್ತಿದ್ದೇವೆ’ ಎಂದರು.

ADVERTISEMENT

ನಿತ್ಯಾನಂದಗೆ ವಾರಂಟ್‌

ರಾಮನಗರ: ಭಕ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ನಿತ್ಯಾನಂದ ಸ್ವಾಮೀಜಿ ವಿರುದ್ಧ ಇಲ್ಲಿನ ಮೂರನೇ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯ ಗುರುವಾರ ಸರ್ಚ್ ವಾರಂಟ್ ಹೊರಡಿಸಿತು.

ಸಿಐಡಿ ಅಧಿಕಾರಿಗಳು ಗುರುವಾರ ನ್ಯಾಯಾಲಯದಲ್ಲಿನ ವಿಚಾರಣೆಗೆ ಹಾಜರಾಗಿದ್ದು, ನಿತ್ಯಾನಂದಗೆ ಜಾಮೀನು ನೀಡಿದ ವ್ಯಕ್ತಿಯನ್ನು ಬಂಧಿಸುವಂತೆ ಕೋರಿದರು. ಅದನ್ನು ನ್ಯಾಯಾಧೀಶರು ಮಾನ್ಯ ಮಾಡಿದರು. ಅಂತೆಯೇ ನ್ಯಾಯಾಧೀಶರು ನಿತ್ಯಾನಂದ ಹುಡುಕಾಟಕ್ಕೆ ವಾರಂಟ್ ಹೊರಡಿಸಿದರು.

ಯುವಕ ಸಾವು

ಬೆಂಗಳೂರು: ಬಿಎಂಟಿಸಿ ಬಸ್ ಹರಿದು ಅಂದನೂರು ಚಿಂತನ್ (26) ಎಂಬುವರು ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಶಾಂತಿನಗರದಲ್ಲಿ ನಡೆದಿದೆ.

ಶಾಂತಿನಗರದಿಂದ ಶಿವಾಜಿನಗರ ಕಡೆ ಹೊರಟಿದ ಬಸ್‍ನಲ್ಲಿ ಚಿಂತನ್ ಪ್ರಯಾಣಿಸುತ್ತಿದ್ದರು. ಕೆ.ಎಚ್. ರಸ್ತೆ ಕಡೆಗೆ ಬಸ್‌ ಹೋಗುತ್ತಿದ್ದಂತೆ. ‘ಬಸ್ ಮೆಜೆಸ್ಟಿಕ್ ಕಡೆ ಹೋಗುತ್ತದೆಯೇ? ಎಂದು ನಿರ್ವಾಹಕಿಯನ್ನು ಕೇಳಿದ್ದಾರೆ. ‘ಶಿವಾಜಿನಗರ ಹೋಗುತ್ತದೆ’ ಎಂದಿದ್ದಾರೆ. ಗಾಬರಿಗೊಂಡ ಚಿಂತನ್, ಬಸ್‍ನಿಂದ ಆಯತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಬಸ್ಸಿನ ಎಡಭಾಗದ ಚಕ್ರ ಹರಿದು ಸ್ಥಳದಲ್ಲೇ ಸಾವು ಸಂಭವಿಸಿದೆ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.