ADVERTISEMENT

ಡಿ. 1ರಿಂದ ಅಂಗನವಾಡಿ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 6:04 IST
Last Updated 29 ನವೆಂಬರ್ 2022, 6:04 IST
   

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರನ್ನು ಶಿಕ್ಷಕಿಯರನ್ನಾಗಿ ಪರಿಗಣಿಸಿ ಇಲ್ಲಿಯೇ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ನೀಡಬೇಕು. ಇಲ್ಲದಿದ್ದರೆ ಡಿ. 1ರಿಂದ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಎಚ್ಚರಿಸಿದೆ.

‘2022ರ ಏಪ್ರಿಲ್‌ 25ರಂದು ಸುಪ್ರೀಂ ಕೋರ್ಟ್‌ ಆದೇಶದಂತೆ 1972ರ ಗ್ರಾಚ್ಯುಟಿ ಕಾಯ್ದೆಯ ಪ್ರಕಾರ ಅಂಗನವಾಡಿ ನೌಕರರು ಗ್ರಾಚ್ಯುಟಿ ಪಡೆಯಲು ಅರ್ಹರು ಎಂದು ತೀರ್ಪು ನೀಡಿದ್ದು, ಇದುವರೆಗೂ ಅದು ಜಾರಿಯಾಗಿಲ್ಲ. ರಾಜ್ಯದಾದ್ಯಂತ ಸಾವಿರಾರು ನಿವೃತ್ತಿ ನೌಕರರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ರಾಜ್ಯ ಸರ್ಕಾರ ಕೂಡಲೇ ಗ್ರಾಚ್ಯುಟಿಯನ್ನು ಪಾವತಿಸಿಬೇಕು’ ಎಂದು ಸಂಘದ ಅಧ್ಯಕ್ಷೆ ಎಸ್. ವರಲಕ್ಷ್ಮಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಅನ್ನದೊಟ್ಟಿಗೆ ಅಕ್ಷರ ಕೇಂದ್ರವಾಗಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ, ಬಲಿಷ್ಠಗೊಳಿಸಬೇಕು. ಐಸಿಡಿಎಸ್‌ ಮಾರ್ಗಸೂಚಿಗಳ ಪ್ರಕಾರ ಆರು ಸೇವೆಗಳಿಗೆ ಮಾತ್ರ ಅಂಗನವಾಡಿ ನೌಕರರನ್ನು ಬಳಸಿಕೊಳ್ಳಬೇಕು. ಆದರೆ ಸ್ತ್ರೀ ಶಕ್ತಿ, ಭಾಗ್ಯಲಕ್ಷ್ಮಿ, ಮಾತೃವಂದನ ಕೆಲಸಗಳಲ್ಲಿ ಬಳಸಿಕೊಳ್ಳಲಾಗುತ್ತಿದ್ದು, ಐಸಿಡಿಎಸ್‌ ಉದ್ದೇಶಕ್ಕೆ ಧಕ್ಕೆ ತರಲಾಗುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಅಂಗನವಾಡಿ ಕೇಂದ್ರದ ವೇಳಾಪಟ್ಟಿಯನ್ನು ಬೆಳಿಗ್ಗೆ 10ರಿಂದ 1 ಗಂಟೆಯ ವರೆಗೂ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಲು ಸಮಯ ನಿಗದಿಗೊಳಿಸಬೇಕು. ಆ ಸಮಯದಲ್ಲಿ ಸಾರ್ವಜನಿಕರಿಗೆ ಅಂಗನವಾಡಿ ಕೇಂದ್ರದ ಭೇಟಿಗೆ ಅವಕಾಶ ಕಲ್ಪಿಸಬಾರದು’ ಎಂದು ಒತ್ತಾಯಿಸಿದರು. ಸಂಘದ ಉಪಾಧ್ಯಕ್ಷೆ ಲೀಲಾವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.