ADVERTISEMENT

ನಿವೇಶನ ಅಕ್ರಮ ಮಾರಾಟ: ಬಂಧನ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2021, 20:39 IST
Last Updated 11 ನವೆಂಬರ್ 2021, 20:39 IST
ನಟರಾಜ್
ನಟರಾಜ್   

ಬೆಂಗಳೂರು: 'ಕರ್ನಾಟಕ ಸರ್ಕಾರದ ‘ಡಿ’ ಗ್ರೂಪ್ ನೌಕರರ ಕೇಂದ್ರ ಸಂಘಟನೆಯ ಸೊಸೈಟಿಯ ನಿವೇಶನಗಳನ್ನು ಅಕ್ರಮವಾಗಿ ಮಾರಾಟ ಮಾಡಿ ವಂಚಿಸುತ್ತಿದ್ದ ಆರೋಪದಡಿ, ಸೊಸೈಟಿಯ ಅಧ್ಯಕ್ಷ ಬಿ.ಎಂ. ನಟರಾಜ್‌ನನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ

‘ವಂಚನೆ ಸಂಬಂಧ 8 ಎಫ್‌ಐಆರ್ ದಾಖಲಾಗಿವೆ. ಪುರಾವೆಗಳನ್ನು ಪರಿಶೀಲಿಸಿ ನಟರಾಜ್‌ನನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿ ಸಿ. ಗೋವಿಂದರಾಜ್, ಪ್ರಕರಣವೊಂದರಲ್ಲಿ ಸದ್ಯ ಜೈಲಿನಲ್ಲಿದ್ದಾನೆ. ಆತನನ್ನು ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಪಡೆಯಬೇಕಿದೆ’ ಎಂದು ಪೊಲೀಸರು ಹೇಳಿದರು.

‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಸೊಸೈಟಿ
ಯಿಂದ ಯಶವಂತಪುರ ಹೋಬಳಿಯ ಶ್ರೀಗಂಧಕಾವಲ್ ಬಳಿಯ ಸರ್ವೆ ನಂ. 30/1ರಲ್ಲಿ ಬಡಾವಣೆ ನಿರ್ಮಿಸಲಾಗಿದೆ. ಅದೇ ಬಡಾವಣೆಯ ನಿವೇಶನಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪ ನಟರಾಜ್ ಮೇಲಿದೆ’ ಎಂದೂ ತಿಳಿಸಿದರು.

ADVERTISEMENT

‘ಒಂದೇ ನಿವೇಶನವನ್ನು ಹಲವರಿಗೆ ಅಕ್ರಮವಾಗಿ ಮಾರಾಟ ಮಾಡಲಾಗಿದೆ. ಉದ್ಯಾನ ಹಾಗೂ ಮೈದಾನಕ್ಕೆ ಮೀಸಲಿಟ್ಟಿದ್ದ ಜಾಗವನ್ನೂ ನಿವೇಶನವೆಂದು ಹೇಳಿ ಮಾರಲಾಗಿದೆ’ ಎಂದೂ ಹೇಳಿದರು.

₹2.25 ಲಕ್ಷ ವಂಚನೆ: ‘ನಾಗರಬಾವಿಯ ಗಣೇಶ್ ಎಂಬುವರು ತಮ್ಮ ಪತ್ನಿ ಪೂರ್ಣಿಮಾ ಹೆಸರಿನಲ್ಲಿ 2003ರಲ್ಲಿ 30x50 ಅಳತೆಯ ನಿವೇಶನ ಖರೀದಿಸಿದ್ದರು. ಅದಕ್ಕಾಗಿ ₹ 2.25 ಲಕ್ಷ ಪಾವತಿಸಿದ್ದರು. ಆದರೆ, ನಿವೇಶನವಿದ್ದ
ಜಾಗ ಪಾರ್ಕಿಂಗ್‌ಗೆ ಮೀಸಲಿಟ್ಟಿದ್ದ ಜಾಗವೆಂಬುದು ಗೊತ್ತಾಗಿತ್ತು’ ಎಂದು ಪೊಲೀಸರು ತಿಳಿಸಿದರು.

‘ತಮಗಾದ ವಂಚನೆಯನ್ನು ಗಣೇಶ್
ಪ್ರಶ್ನಿಸಿದ್ದರು. ಬದಲಿ ನಿವೇಶನ ನೀಡುವುದಾಗಿ ನಟರಾಜ್ ಭರವಸೆ ನೀಡಿದ್ದ. ನಿಗದಿತ ಅವಧಿ ಮುಗಿದರೂ ಯಾವುದೇ ನಿವೇಶನ ನೀಡಿರಲಿಲ್ಲ. ಹಣವನ್ನೂ ವಾಪಸು ಕೊಟ್ಟಿರಲಿಲ್ಲ. ನೊಂದ ಗಣೇಶ್, ಠಾಣೆಗೆ ದೂರು ನೀಡಿದ್ದರು. ಇದಾದ ನಂತರ, 8 ಮಂದಿ ಪ್ರತ್ಯೇಕ ದೂರು ನೀಡಿದ್ದಾರೆ’ ಎಂದೂ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.