ADVERTISEMENT

ಎಪಿಎಂಸಿ ಕಾಯ್ದೆ: ಮಾರ್ಗಸೂಚಿ ನಿರೀಕ್ಷೆಯಲ್ಲಿ ಸರ್ಕಾರ

ಲಾಕ್‌ಡೌನ್‌ಗೆ ಮುನ್ನವೇ ನೇರ ಖರೀದಿಗೆ 60 ಕಂಪನಿ ಆಸಕ್ತಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 20:11 IST
Last Updated 22 ಜೂನ್ 2020, 20:11 IST
ಮಾರುಕಟ್ಟೆ- ಸಾಂದರ್ಭಿಕ ಚಿತ್ರ
ಮಾರುಕಟ್ಟೆ- ಸಾಂದರ್ಭಿಕ ಚಿತ್ರ   

ಬೆಂಗಳೂರು: ಎಪಿಎಂಸಿ ತಿದ್ದುಪಡಿ ಕಾಯ್ದೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯಸರ್ಕಾರವು ಕೇಂದ್ರಸರ್ಕಾರದ ಮಾರ್ಗಸೂಚಿಗಳಿಗಾಗಿ ಕಾಯುತ್ತಿದೆ.

ಕೇಂದ್ರ ಸರ್ಕಾರ ಕಳೆದ ಮೇನಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದೆ.ಕೃಷಿ ಉತ್ಪನ್ನಗಳ ಮಾರಾಟ ಮತ್ತು ಖರೀದಿ ಪ್ರಕ್ರಿಯೆ ನಡೆಸಲು ಖಾಸಗಿ ಕಂಪನಿಗಳಿಗೂ ಈ ಕಾಯ್ದೆ ಅವಕಾಶ ನೀಡಲಿದೆ.

ಈ ತಿದ್ದುಪಡಿ ಕಾಯ್ದೆಯು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಅಧಿಕಾರವನ್ನು ಮೊಟಕುಗೊಳಿಸಲಿದೆ. ಅಲ್ಲದೆ, ಇದು ರೈತರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ವಿರೋಧಪಕ್ಷಗಳು ಟೀಕಿಸಿದ್ದವು.

ADVERTISEMENT

ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕ ಕರೀಗೌಡ, ‘ಕೇಂದ್ರಸರ್ಕಾರದ ಮಾರ್ಗಸೂಚಿಗಳನ್ನು ನಾವು ಎದುರು ನೋಡುತ್ತಿದ್ದೇವೆ. ಮಾರ್ಗಸೂಚಿಗಳು ಬಂದ ನಂತರ, ಕಾಯ್ದೆಗೆ ತಂದಿರುವ ತಿದ್ದುಪಡಿಗಳನ್ನು ಅನುಷ್ಠಾನಕ್ಕೆ ತರಲಾಗುವುದು’ ಎಂದರು.

ಕೃಷಿ ಮಾರುಕಟ್ಟೆ ಸ್ಥಾಪಿಸಲು ಎಷ್ಟು ಖಾಸಗಿ ಕಂಪನಿಗಳು ಈವರೆಗೆ ಅರ್ಜಿ ಸಲ್ಲಿಸಿವೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅನುಮತಿಗಾಗಿ ಇನ್ನು ಮೇಲೆ ಕಂಪನಿಗಳು ಇಲಾಖೆಯನ್ನು ಸಂಪರ್ಕಿಸಬಹುದು’ ಎಂದರು.

ಖಾಸಗಿ ಕೃಷಿ ಮಾರುಕಟ್ಟೆ ಸ್ಥಾಪಿಸಲು ಈಗ ಅವಕಾಶ ಇದೆ. ಆದರೆ, ಲಾಕ್‌ಡೌನ್‌ಗಿಂತಲೂ ಮೊದಲೇ 60ಕ್ಕೂ ಹೆಚ್ಚು ಕಂಪನಿಗಳು, ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು ಖರೀದಿಸಲು ಅನುಮತಿ ಕೋರಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದವು ಎಂದು ಮೂಲಗಳು ತಿಳಿಸಿವೆ.

‘ಈಗಾಗಲೇ ಹಲವಾರು ಮಧ್ಯವರ್ತಿಗಳಿಂದ ರೈತರು ಬಸವಳಿದಿದ್ದಾರೆ. ಈಗ ಖಾಸಗಿ ಕಂಪನಿಗಳ ರೂಪದಲ್ಲಿ ಈ ವ್ಯವಸ್ಥೆಗೆ ಮತ್ತೊಬ್ಬರು ಮಧ್ಯವರ್ತಿಗಳು ಸೇರಲು ಈ ತಿದ್ದುಪಡಿ ಕಾಯ್ದೆ ಅನುವು ಮಾಡಿಕೊಡಲಿದೆ’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರಬೂರು ಶಾಂತಕುಮಾರ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.