ADVERTISEMENT

ಆ್ಯಪ್‌ನಲ್ಲಿ ಹೂಡಿಕೆ ಆಮಿಷ; ₹ 2.29 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 22:27 IST
Last Updated 10 ಏಪ್ರಿಲ್ 2021, 22:27 IST

ಬೆಂಗಳೂರು: ನೆಟ್‌ವರ್ಕ್‌ ಮಾರ್ಕೆಟಿಂಗ್ ಆ್ಯಪ್‌ ಮೂಲಕ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಹಣ ಸಿಗುವುದಾಗಿ ಆಮಿಷವೊಡ್ಡಿ ₹ 2.29 ಲಕ್ಷ ಪಡೆದು ವಂಚಿಸಲಾಗಿದೆ. ಈ ಕುರಿತು ಕೇಂದ್ರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಂಚನೆ ಕುರಿತು ನಗರದ ಕಾಲೇಜೊಂದರ ವಿದ್ಯಾರ್ಥಿ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ವಾಟ್ಸ್‌ಆ್ಯಪ್‌ ಮೂಲಕ ವಿದ್ಯಾರ್ಥಿಗೆ ಸಂದೇಶ ಕಳುಹಿಸಿದ್ದ ಆರೋಪಿ, ‘ಸ್ನೋಪರ್’ ಹೆಸರಿನ ನೆಟ್‌ವರ್ಕ್ ಮಾರ್ಕೆಟಿಂಗ್ ಆ್ಯಪ್‌ ಬಗ್ಗೆ ತಿಳಿಸಿದ್ದ. ಹಣವನ್ನು ಹೂಡಿಕೆ ಮಾಡಿದರೆ ಕೆಲವೇ ದಿನಗಳಲ್ಲಿ ದುಪ್ಪಟ್ಟು ಹಣ ವಾಪಸು ಬರುವುದಾಗಿ ಹೇಳಿದ್ದ. ಅದನ್ನು ನಂಬಿದ್ದ ವಿದ್ಯಾರ್ಥಿ, ಆರೋಪಿ ಹೇಳಿದ್ದ ಖಾತೆಗಳಿಗೆ ಹಂತ ಹಂತವಾಗಿ ₹ 2.29 ಲಕ್ಷ ಜಮೆ ಮಾಡಿದ್ದರು. ಈ ಸಂಗತಿ ದೂರಿನಲ್ಲಿದೆ’ ಎಂದೂ ಮೂಲಗಳು ತಿಳಿಸಿವೆ.

ADVERTISEMENT

‘ಹಣ ಪಡೆದ ನಂತರ ಆರೋಪಿ ಯಾವುದೇ ಪ್ರತಿಕ್ರಿಯೆ ನೀಡದೇ ನಾಪತ್ತೆಯಾಗಿದ್ದಾನೆ. ಮೊಬೈಲ್ ಸಹ ಸ್ವಿಚ್ ಆಫ್ ಆಗಿದೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.