ADVERTISEMENT

ಠಾಣೆಯಲ್ಲಿ ಟೇಬಲ್ ಏರಿ ವಿದ್ಯಾರ್ಥಿಗಳ ದರ್ಪ

ಪೊಲೀಸರಿಗೆ ಹೆಲ್ಮೆಟ್, ಕಟ್ಟಿಗೆಯಿಂದ ಹಲ್ಲೆ: ಕಮಿಷನರ್‌ಗಳ ಮಕ್ಕಳೆಂದು ರಂಪಾಟ

​ಪ್ರಜಾವಾಣಿ ವಾರ್ತೆ
Published 5 ಮೇ 2019, 19:38 IST
Last Updated 5 ಮೇ 2019, 19:38 IST
ರಾಹುಲ್, ಆದಿತ್ಯ
ರಾಹುಲ್, ಆದಿತ್ಯ   

ಬೆಂಗಳೂರು: ಪಾನಮತ್ತರಾಗಿ ಬೈಕ್ ಸವಾರಿ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರ ಮೇಲೆ ಹೆಲ್ಮೆಟ್ ಹಾಗೂ ಕಟ್ಟಿಗೆ ತುಂಡಿನಿಂದ ಹಲ್ಲೆ ನಡೆಸಿದ್ದಲ್ಲದೆ, ಠಾಣೆಯಲ್ಲಿ ಪೀಠೋಪಕರಣಗಳನ್ನು ಧ್ವಂಸ ಮಾಡಿ ದರ್ಪ ಮೆರೆದಿದ್ದ ಗೋವಾದ ಇಬ್ಬರು ಎಂಬಿಎ ಪದವೀಧರರು ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.

ಹರಿಯಾಣದ ರಾಹುಲ್ ತ್ರಿಪಾಠಿ (22) ಹಾಗೂ ಕೋಲ್ಕತ್ತದ ಆದಿತ್ಯ ಶ್ರುತ್ರಿಯಾ (24) ಬಂಧಿತರು. ಗೋವಾದಲ್ಲಿ ಎಂಬಿಎ ಓದುತ್ತಿದ್ದ ಇವರು, ಎರಡು ತಿಂಗಳ ಹಿಂದೆ ನಗರಕ್ಕೆ ಬಂದು ಯಮಲೂರಿನ ಖಾಸಗಿ ಕಂಪನಿಯೊಂದರಲ್ಲಿ ಇಂಟರ್ನ್‌ಶಿಪ್‌ ಮಾಡುತ್ತಿದ್ದರು. ಶುಕ್ರವಾರ ರಾತ್ರಿ ಎಚ್‌ಎಸ್‌ಆರ್‌ ಲೇಔಟ್ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ನಂಜೇಗೌಡ ಹಾಗೂ ಕಾನ್‌ಸ್ಟೆಬಲ್ ಅಶೋಕ್ ಅವರ ಮೇಲೆ ಇವರು ಹಲ್ಲೆ ನಡೆಸಿದ್ದರು.

‘ನಾವು ಕಮಿಷನರ್ ಮಕ್ಕಳು’: ಮಾರತ್ತಹಳ್ಳಿಯ ಪೇಯಿಂಗ್ ಗೆಸ್ಟ್‌ ಕಟ್ಟಡದಲ್ಲಿ ಉಳಿದುಕೊಂಡಿದ್ದ ಆರೋಪಿಗಳು, ಆ ದಿನ ರಾತ್ರಿ ಪಾನಮತ್ತರಾಗಿ ಬುಲೆಟ್ ಬೈಕ್‌ನಲ್ಲಿ ಸುತ್ತಾಟಕ್ಕೆ ಹೊರಟಿದ್ದರು. ಎಚ್‌ಎಸ್‌ಆರ್ ಲೇಔಟ್ ಸಂಚಾರ ಪೊಲೀಸರು, ಠಾಣೆಯಿಂದ ಕೂಗಳತೆ ದೂರದಲ್ಲೇ ಬ್ಯಾರಿಕೇಡ್‌ಗಳನ್ನು ಹಾಕಿಕೊಂಡು ಪಾನಮತ್ತ ಚಾಲಕರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದರು. ರಾತ್ರಿ 1 ಗಂಟೆ ಸುಮಾರಿಗೆ ಅಲ್ಲಿಗೆ ಬಂದ ಈ ವಿದ್ಯಾರ್ಥಿಗಳನ್ನೂ ತಡೆದಿದ್ದರು.

ADVERTISEMENT

‘ವಿಪರೀತ ಕುಡಿದಿದ್ದ ಅವರಿಗೆ, ಮೈಮೇಲೆ ನಿಯಂತ್ರಣವೇ ಇರಲಿಲ್ಲ. ತಪಾಸಣೆ ಮಾಡಲು ಆಲ್ಕೋಮೀಟರ್ ಸಾಧನ ತೆಗೆದುಕೊಂಡಾಗ ಅದನ್ನೇ ಕಿತ್ತೆಸೆದರು. ‘ನಾವು ಪೊಲೀಸ್ ಕಮಿಷನರ್‌ಗಳ ಮಕ್ಕಳು. ನಮ್ಮನ್ನೇ ತಡೆಯುತ್ತೀರಾ’ ಎಂದು ಗಲಾಟೆ ಪ್ರಾರಂಭಿಸಿದರು. ಈ ಹಂತದಲ್ಲಿ ಆದಿತ್ಯ ಹೆಲ್ಮೆಟ್ ತೆಗೆದುಕೊಂಡು ನನ್ನ ತಲೆಗೆ ಹೊಡೆದು, ಸಮವಸ್ತ್ರವನ್ನು ಕಿತ್ತು ಹಾಕಿದ. ಮತ್ತೊಬ್ಬ ಅಲ್ಲೇ ಬಿದ್ದಿದ್ದ ರಸ್ತೆ ತುಂಡಿನಿಂದ ನಂಜೇಗೌಡ ಅವರ ಮೇಲೂ ಹಲ್ಲೆ ನಡೆಸಿದ’ ಎಂದು ಕಾನ್‌ಸ್ಟೆಬಲ್ ಅಶೋಕ್ ‘ಪ್ರಜಾವಾಣಿ’ಗೆ ವಿವರಿಸಿದರು.

ಟೇಬಲ್‌ ಮೇಲೇರಿ ದರ್ಪ: ‘ನಂತರ ಆಟೊ ಹಾಗೂ ಕ್ಯಾಬ್‌ ಚಾಲಕರ ನೆರವಿನಿಂದ ಇಬ್ಬರನ್ನೂ ಠಾಣೆಗೆ ಕರೆದೊಯ್ದೆವು. ಅಲ್ಲೂ ದರ್ಪ ಮುಂದುವರಿಸಿದ ಅವರು, ಪೀಠೋಪಕರಣಗಳನ್ನು ಧ್ವಂಸ ಮಾಡಿದರು. ಕಂಪ್ಯೂಟರ್‌ನ ಕೇಬಲ್‌ಗಳನ್ನು ಕಿತ್ತೆಸೆದರು. ಈ ಹಂತದಲ್ಲಿ ನಂಜೇಗೌಡ ನಿಯಂತ್ರಣ ಕೊಠಡಿಗೆ ಕರೆ ಮಾಡಲು ಫೋನ್ ಕೈಗೆತ್ತಿಕೊಂಡಾಗ, ಅವರ ಕೆನ್ನೆಗೇ ಹೊಡೆದು ಫೋನ್ ನೆಲಕ್ಕೆಸೆದರು’ ಎಂದು ಅಶೋಕ್ ದೂರಿನಲ್ಲಿ ಹೇಳಿದ್ದಾರೆ.

‘ಕೊನೆಗೆ ಟೇಬಲ್‌ ಮೇಲೇರಿದ ಇಬ್ಬರೂ, ‘ಅದ್ಯಾರಿಗೇ ಫೋನ್ ಮಾಡುತ್ತೀರೋ ಮಾಡ್ರೋ’ ಎನ್ನುತ್ತ ನನ್ನ ತಲೆ ಮೇಲೇ ಕುರ್ಚಿಯೊಂದನ್ನು ಎಸೆದರು. ಈ ಸಂದರ್ಭದಲ್ಲಿ ಠಾಣೆಯಲ್ಲಿ ನಾವಿಬ್ಬರೇ ಇದ್ದೆವು. ನಶೆಯಲ್ಲಿ ಮೃಗಗಳಂತೆ ವರ್ತಿಸುತ್ತಿದ್ದ ಅವರನ್ನು ನಿಯಂತ್ರಿಸುವುದಕ್ಕೆ ವಯಸ್ಸಾದ ನಮ್ಮಿಂದ ಸಾಧ್ಯವೇ ಆಗಲಿಲ್ಲ. ಸ್ವಲ್ಪ ಸಮಯದಲ್ಲೇ ಬೆಳ್ಳಂದೂರು ಹೊಯ್ಸಳ ಪೊಲೀಸರು ಬಂದು, ಅವರನ್ನು ಠಾಣೆಗೆ ಎಳೆದೊಯ್ದರು. ನನ್ನ 15 ವರ್ಷದ ಸೇವಾವಧಿಯಲ್ಲಿ ಇಂಥ ಪರಿಸ್ಥಿತಿಯನ್ನು ಎಂದೂ ಎದುರಿಸಿರಲಿಲ್ಲ’ ಎಂದು ಅಶೋಕ್ ಬೇಸರ ವ್ಯಕ್ತಪಡಿಸಿದರು.

‘ಅಶೋಕ್ ಹಾಗೂ ನಂಜೇಗೌಡ ಇಬ್ಬರಿಗೂ ತಲೆಗೆ ಪೆಟ್ಟು ಬಿದ್ದಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಆರೋಪಿಗಳು ಮದ್ಯ ಸೇವನೆಯ ಜತೆಗೆ ಡ್ರಗ್ಸ್ ಕೂಡ ತೆಗೆದುಕೊಂಡಿದ್ದರು ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಹೆಚ್ಚಿನ ತಪಾಸಣೆಗಾಗಿ ಅವರ ರಕ್ತದ ಮಾದರಿಯನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದೇವೆ’ ಎಂದು ಬೆಳ್ಳಂದೂರು ಪೊಲೀಸರು ಹೇಳಿದರು.

ನ್ಯಾಯಾಂಗ ಬಂಧನ
‘ತಮ್ಮ ಪೋಷಕರು ಪೊಲೀಸ್ ಕಮಿಷನರ್‌ಗಳು ಎಂದು ಆರೋಪಿಗಳು ಹೇಳಿಕೊಂಡಿದ್ದರು. ಆದರೆ, ಆದಿತ್ಯನ ತಂದೆ ಕೋಲ್ಕತ್ತದಲ್ಲಿ ಕಾಗದದ ಕಾರ್ಖಾನೆಯ ನೌಕರರಾಗಿದ್ದರೆ, ರಾಹುಲ್‌ನ ಅಪ್ಪ ಹರಿಯಾಣದಲ್ಲಿ ವ್ಯಾಪಾರಿಯಾಗಿದ್ದಾರೆ. ನ್ಯಾಯಾಧೀಶರ ಸೂಚನೆಯಂತೆ ವಿದ್ಯಾರ್ಥಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.