ADVERTISEMENT

ನಾಲ್ವರ ಬಂಧನ, ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 20:42 IST
Last Updated 20 ಡಿಸೆಂಬರ್ 2018, 20:42 IST

ಬೆಂಗಳೂರು: ಒಳಚರಂಡಿ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜಲಮಂಡಳಿಯ ಮೂವರು ಅಧಿಕಾರಿಗಳು ಹಾಗೂ ಗುತ್ತಿಗೆದಾರನನ್ನು ಬಂಧಿಸಿದ ರಾಜರಾಜೇಶ್ವರಿನಗರ ಪೊಲೀಸರು, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

‘ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ನವನೀತ್, ಸ್ನೇಹಾ, ಸಹಾಯಕ ಎಂಜಿನಿಯರ್‌ ದಿಲೀಪ್ ಹಾಗೂ ‘ಕೆಬಿಆರ್ ಕನ್‌ಸ್ಟ್ರಕ್ಷನ್‌’ನ ಗುತ್ತಿಗೆದಾರ ದಿಲೀಪ್ ಅವರನ್ನು ಗುರುವಾರ ಬೆಳಿಗ್ಗೆ ಬಂಧಿಸಲಾಯಿತು. ಬಳಿಕ ವಿಚಾರಣೆ ನಡೆಸಿ ಠಾಣಾ ಜಾಮೀನಿನ ಮೇಲೆ ಬಿಟ್ಟು ಕಳುಹಿಸಿದೆವು’ ಎಂದು ರಾಜರಾಜೇಶ್ವರಿನಗರ ಪೊಲೀಸರು ತಿಳಿಸಿದರು.

ಬುಧವಾರ ಮಧ್ಯಾಹ್ನ ಸ್ಯಾನಿಟರಿ ಪೈಪ್ ಅಳವಡಿಸುತ್ತಿದ್ದ ವೇಳೆ ಮಣ್ಣು ಕುಸಿದು ಜೇವರ್ಗಿ ತಾಲ್ಲೂಕಿನ ಮಡಿವಾಳಪ್ಪ ಗೌಡ ಅಲಿಯಾಸ್ ಮುತ್ತು (26) ಎಂಬುವರು ಮೃತಪಟ್ಟು, ವಿಜಯಪುರದ ಕಾರ್ಮಿಕ ಶರಣಗೌಡ ಗಾಯಗೊಂಡಿದ್ದರು. ಮಣ್ಣಿನಲ್ಲಿ ಹೂತು ಹೋಗಿದ್ದ ಮಡಿವಾಳಪ್ಪ ಅವರ ದೇಹವನ್ನು ಹೊರತೆಗೆಯಲು ಹರಸಾಹಸಪಟ್ಟಿದ್ದ ಅಗ್ನಿಶಾಮಕ ಸಿಬ್ಬಂದಿ, ಸತತ ಎಂಟು ತಾಸು ಕಾರ್ಯಾಚರಣೆ ನಡೆಸಿ ರಾತ್ರಿ 11 ಗಂಟೆಗೆ ಹೊರತೆಗೆದಿದ್ದರು.

ADVERTISEMENT

‘ಕೆಲಸದ ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಕಾರ್ಮಿಕರಿಗೂ ಸೌಕರ್ಯಗಳನ್ನು ಒದಗಿಸಿರಲಿಲ್ಲ. ಜಲಮಂಡಳಿ ಹಾಗೂ ಗುತ್ತಿಗೆದಾರರ ಅಜಾಗರೂಕತೆಯಿಂದಲೇ ಈ ದುರಂತ ಸಂಭವಿಸಿದೆ’ ಎಂದು ಆರೋಪಿಸಿ ಮಡಿವಾಳಪ್ಪ ಅವರ ಸಂಬಂಧಿ ಪ್ರಭು ದೂರು ಕೊಟ್ಟಿದ್ದರು.

ಅದರನ್ವಯ ನಿರ್ಲಕ್ಷ್ಯದ ಸಾವು (ಐಪಿಸಿ 304ಎ) ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಲಾಗಿದೆ. ಗುತ್ತಿಗೆ ಕಂಪನಿಯ ಮಾಲೀಕ ಬಾಬುರಾವ್ ತಲೆಮರೆಸಿಕೊಂಡಿದ್ದು, ಶೋಧ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.