ADVERTISEMENT

ಪಾಕ್‌ಗೆ ಜಿಂದಾಬಾದ್ ಹೇಳಿದವನ ಬಂಧನ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2019, 20:09 IST
Last Updated 8 ಮಾರ್ಚ್ 2019, 20:09 IST
ಗೌಸುದ್ದೀನ್
ಗೌಸುದ್ದೀನ್   

ಬೆಂಗಳೂರು: ಭಾರತೀಯ ವಾಯುಸೇನೆ ವಿಂಗ್‌ ಕಮಾಂಡರ್ ಅಭಿನಂದನ್ ವರ್ಧಮಾನ್‌ ಅವರು ಪಾಕಿಸ್ತಾನದ ವಶದಲ್ಲಿದ್ದಾಗ ‘ಪಾಕಿಸ್ತಾನ್ ಆರ್ಮಿ ಜಿಂದಾಬಾದ್’ ಎಂದು ಫೇಸ್‌ಬುಕ್‌ನಲ್ಲಿ ಬರಹ ಪ್ರಕಟಿಸಿದ್ದ ಆರೋಪದಡಿ ಮಹಮದ್ ಗೌಸುದ್ದೀನ್ ಎಂಬಾತನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.

‘ಗದಗ ಜಿಲ್ಲೆಯ ಗೌಸುದ್ದೀನ್, ಜಾಲ ಹೋಬಳಿಯ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಟೀಂ ಲೀಡರ್ ಆಗಿದ್ದಾನೆ. ಈತನ ವಿರುದ್ಧ ಅದೇ ಹೋಬಳಿಯ ಎನ್.ಜಗದೀಶ್ ಎಂಬುವರು ಗುರುವಾರ ದೂರು ಕೊಟ್ಟಿದ್ದರು. ‘ಅಭಿನಂದನ್ ಭಾರತೀಯ ಮಾಧ್ಯಮಗಳ ವಿರುದ್ಧವಾಗಿ ಮಾತನಾಡಿದರು ಎನ್ನಲಾದ ವಿಡಿಯೊವೊಂದು ‘ಐಐಆರ್‌ಸಿ’ ಹೆಸರಿನ ಫೇಸ್‌ಬುಕ್‌ ಪೇಜ್‌ನಲ್ಲಿತ್ತು. ಅದಕ್ಕೆ ಪ್ರತಿಕ್ರಿಯಿಸಿದ್ದ ಗೌಸುದ್ದೀನ್, ‘ಅಭಿನಂದನ್ ದೇಶದ ಮಾಧ್ಯಮಗಳಿಗೆ ಸರಿಯಾಗಿಯೇ ಕಪಾಳ ಮೋಕ್ಷ ಮಾಡಿದರು. ಪಾಕಿಸ್ತಾನಕ್ಕೆ ಜಿಂದಾಬಾದ್. ಪಾಕ್‌ ಆರ್ಮಿಗೆ ಜಿಂದಾಬಾದ್’ ಎಂದು ಪ್ರತಿಕ್ರಿಯಿಸಿದ್ದ. ಅದನ್ನು ನೋಡಿ ಸ್ನೇಹಿತರು ನನಗೆ ವಿಷಯ ತಿಳಿಸಿದರು’ ಎಂದು ಜಗದೀಶ್ ದೂರಿನಲ್ಲಿ ಹೇಳಿದ್ದಾರೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಜಗದೀಶ್, ‘ಗೌಸುದ್ದೀನ್ ಭಾರತೀಯ ಪ್ರಜೆಯಾಗಿದ್ದುಕೊಂಡು, ಪಾಕಿಸ್ತಾನವನ್ನು ಬೆಂಬಲಿಸಿದ್ದ. ಈ ಮೂಲಕ ರಾಷ್ಟ್ರದ ಸಮಗ್ರತೆಗೆ ಧಕ್ಕೆ ತರುವು ಕೆಲಸ ಮಾಡಿದ್ದ. ಆತ ಅಂತಹ ಸ್ಟೇಟಸ್ ಹಾಕಿರುವುದು ಗೊತ್ತಿದ್ದರೂ ಕಂಪನಿಯವರು ಸುಮ್ಮನೇ ಕುಳಿತಿದ್ದರು. ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದರು.

ADVERTISEMENT

ಕ್ಷಮಾಪಣೆ ಪತ್ರ ಬರೆದಿದ್ದ

ಗೌಸುದ್ದೀನ್‌ನ ಬರಹ ನೋಡಿ ಸಹೋದ್ಯೋಗಿಗಳೂ ಕುಪಿತಗೊಂಡಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಕಂಪನಿಯ ಆಡಳಿತ ಮಂಡಳಿ, ‘ಇನ್ನೆಂದೂ ಇಂತಹ ಪ್ರಚೋದನಾಕಾರಿ ಬರಹಗಳನ್ನು ಬರೆಯುವುದಿಲ್ಲ’ ಎಂದು ಕ್ಷಮಾಪಣಾ ಪತ್ರ ಬರೆಸಿಕೊಂಡಿತ್ತು. ಆ ನಂತರ ಆರೋಪಿ ಸ್ಟೇಟಸ್ ಅಳಿಸಿ ಹಾಕಿದ್ದ.ಆದರೆ, ಅದಕ್ಕೂ ಮುನ್ನವೇ ದೂರುದಾರರು ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದರು ಎಂದು ಬಾಗಲೂರು ಪೊಲೀಸರು ಮಾಹಿತಿಯನ್ನು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.