ಬೆಂಗಳೂರು: ಹೋಟೆಲೊಂದರಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆ ಮೇಲೆ ನಿಗಾ ವಹಿಸದೇ ನಿರ್ಲಕ್ಷ್ಯ ವಹಿಸಿ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಅಶೋಕನಗರ ಠಾಣೆಯ ಇನ್‌ಸ್ಪೆಕ್ಟರ್ ಶ್ರೀಕಾಂತ್ ತೋಟಗಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಠಾಣೆ ವ್ಯಾಪ್ತಿಯ ದಿ ಪ್ರೈಡ್ ಹೋಟೆಲ್ ಮೇಲೆ ಸಿಸಿಬಿ ಪೊಲೀಸರು ಇತ್ತೀಚೆಗಷ್ಟೇ ದಾಳಿ ಮಾಡಿದ್ದರು. ಮಾನವ ಕಳ್ಳ ಸಾಗಾಣಿಕೆ ಮೂಲಕ ಯುವತಿಯರನ್ನು ಕರೆತಂದು ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಸಂಗತಿಯನ್ನು ಪತ್ತೆ ಮಾಡಿದ್ದರು.
‘ಹೋಟೆಲ್‌ನಲ್ಲಿ ಹಲವು ದಿನಗಳಿಂದ ಅಕ್ರಮ ಚಟುವಟಿಕೆ ನಡೆಯುತ್ತಿದೆ. ಇದರ ತಡೆಗೆ ಇನ್‌ಸ್ಪೆಕ್ಟರ್ ಗಮನ ಹರಿಸಿರಲಿಲ್ಲ’ ಎಂದು ಸಿಸಿಬಿ ಪೊಲೀಸರು ವರದಿ ನೀಡಿದ್ದರು. ಅದರನ್ವಯ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ, ಪ್ರಾಥಮಿಕ ತನಿಖೆ ನಡೆಸಿ ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಅವರಿಗೆ ವರದಿ ಸಲ್ಲಿಸಿದ್ದರು.
ವರದಿ ಪರಿಶೀಲಿಸಿದ್ದ ದಯಾನಂದ್, ಇನ್‌ಸ್ಪೆಕ್ಟರ್ ಅವರನ್ನು ಅಮಾನತು ಮಾಡಿ ಸೋಮವಾರ ಆದೇಶ ಹೊರಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.