ಬೆಂಗಳೂರು: ಬಾರ್‌ನಲ್ಲಿ ಮದ್ಯ ಸೇವಿಸುತ್ತಿದ್ದ ರೌಡಿಶೀಟರ್ ಮೇಲೆ ಹಳೆ ವೈಷಮ್ಯಕ್ಕೆ ತೀವ್ರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದ ಐವರು ಆರೋಪಿಗಳನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ
ಏಪ್ರಿಲ್ 27ರಂದು ಸುಕೇಶ್ ಎಂಬಾತನ ಮೇಲೆ ಬಿಯರ್ ಬಾಟಲ್‌ಗಳಿಂದ ಹಲ್ಲೆ ಮಾಡಿದ್ದ ಪವನ್, ಧನುಷ್, ಸತೀಶ್, ಕಿರಣ್ ಹಾಗೂ ಯಶವಂತ್ ಅವರನ್ನು ಬಂಧಿಸಲಾಗಿದೆ.
‘ಕುಮಾರಸ್ವಾಮಿ ಲೇಔಟ್ ಠಾಣೆಯ ರೌಡಿಶೀಟರ್‌ಗಳಾದ ಸುಕೇಶ್ ಹಾಗೂ ಆತನ ಸಹೋದರನಿಗೆ, 2017ರಿಂದಲೂ ಪವನ್ ಹಾಗೂ ಆತನ ಗುಂಪಿನೊಂದಿಗೆ ವೈಮನಸ್ಸಿತ್ತು. ಸುಕೇಶ್ ಹಾಗೂ ಆತನ ಸಹೋದರ ಸೇರಿ ಪವನ್‌ನನ್ನು ಮನೆ ಬಿಟ್ಟು ಓಡಿಸಿದ್ದರು. ಅಲ್ಲದೇ ಮತ್ತೊಬ್ಬ ಆರೋಪಿ ಧನುಶ್‌ಗೂ ಸುಕೇಶ್ ಕಿರುಕುಳ ನೀಡಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಏಪ್ರಿಲ್ 27ರಂದು ಬೇರೊಬ್ಬ ವ್ಯಕ್ತಿಯನ್ನು ಭೇಟಿಯಾಗಲು ಪವನ್, ಧನುಶ್ ಮತ್ತು ಇತರೆ ಆರೋಪಿಗಳು ಕೋಣನಕುಂಟೆ ಆರ್.ಆರ್. ಬಾರ್‌ಗೆ ಬಂದಿದ್ದರು. ಇದೇ ಸಂದರ್ಭದಲ್ಲಿ ಬಾರ್‌ನಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದ ಸುಕೇಶ್‌ನನ್ನು ಗಮನಿಸಿ, ಆತನ ಮೇಲೆ ಬಿಯರ್ ಬಾಟಲ್‌ಗಳಿಂದ ಹಲ್ಲೆಗೈದು ಪರಾರಿಯಾಗಿದ್ದರು’ ಎಂದು ಹೇಳಿದ್ದಾರೆ.
‘ಸುಕೇಶ್ ಕೊಲೆ ಯತ್ನದ ಆರೋಪದಡಿ ಪವನ್ ಮತ್ತು ಆತನ ಸಹಚರರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ.ಜಗಲಾಸರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.