ಬೆಂಗಳೂರು: ವಾಯುಸೇನೆಯ ವಿಂಗ್ ಕಮಾಂಡರ್ ಅವರನ್ನು ಅಡ್ಡಗಟ್ಟಿ ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿದ ಆರೋಪಕ್ಕೆ ಸಂಂಧಿಸಿದಂತೆ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಶಿಲಾದಿತ್ಯ ಬೋಸ್ ಹಲ್ಲೆಗೆ ಒಳಗಾದ ವಿಂಗ್ ಕಮಾಂಡರ್. ಇವರ ಪತ್ನಿ ಮಧುಮಿತಾ ದತ್ತ ದೂರು ಆಧರಿಸಿ ಖಾಸಗಿ ಕಂಪನಿಯ ಟೆಕಿ ವಿಕಾಸ್ ಕುಮಾರ್ ಅವರನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
ವಾಯುಪಡೆಯ ಕೋಲ್ಕತ್ತ ನೆಲೆಯಲ್ಲಿ ವಿಂಗ್ ಕಮಾಂಡರ್ ಆಗಿರುವ ಶಿಲಾದಿತ್ಯ ಬೋಸ್ ಅವರು ಬೆಂಗಳೂರಿನಲ್ಲಿರುವ ಪತ್ನಿಯನ್ನು ಭೇಟಿ ಮಾಡಲು ಬಂದಿದ್ದರು. ಸಿ.ವಿ.ರಾಮನ್ ನಗರದಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ವಸತಿಗೃಹದಲ್ಲಿ ಪತ್ನಿ ಮಧುಮಿತಾ ವಾಸವಾಗಿದ್ದಾರೆ.
‘ಅನಾರೋಗ್ಯ ಪೀಡಿತ ತಂದೆ ನೋಡಲು ಬೋಸ್ ಅವರು ಸೋಮವಾರ ಬೆಳಗಿನ ಜಾವ ಕೋಲ್ಕತ್ತಾಗೆ ತೆರಳಬೇಕಿತ್ತು. ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ, ದ್ವಿಚಕ್ರ ವಾಹನ ಸವಾರ ನಮ್ಮ ಕಾರನ್ನು ಹಿಂದಿಕ್ಕಿದ. ಬಳಿಕ ಮತ್ತೆ ವಾಪಸ್ ಬಂದು ಕಾರನ್ನು ಅಡ್ಡಗಟ್ಟಿ, ಚಾಲನೆ ಮಾಡುತ್ತಿದ್ದ ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿದ. ಕಾರಿನ ಎಡಭಾಗದಲ್ಲಿ ಕುಳಿತಿದ್ದ ಬೋಸ್ ಅವರಿಗೆ ಕೈಯಿಂದ ಹೊಡೆದ. ಬಳಿಕ ಅಲ್ಲೇ ಇದ್ದ ಕಲ್ಲಿನಿಂದ ತಲೆಗೆ ಬಲವಾಗಿ ಹೊಡೆದ ಪರಿಣಾಮ ಗಾಯವಾಗಿ, ರಕ್ತ ಸುರಿದಿದೆ. ಬಳಿಕ ಸ್ಥಳೀಯರು ಬಂದು ಜಗಳ ಬಿಡಿಸಿದರು’ ಎಂದು ಮಧುಮಿತ ದತ್ತ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ ಸಂಬಂಧ ಪೂರ್ವ ವಿಭಾಗದ ಡಿಸಿಪಿ ದೇವರಾಜ್ ಮಾತನಾಡಿ, ‘ವಾಯುಪಡೆ ವಿಂಗ್ ಕಮಾಂಡರ್ ಮೇಲೆ ಹಲ್ಲೆ ನಡೆಸಿರುವ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿ ವಿಕಾಸ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ. ಖಾಸಗಿ ಕಂಪನಿಯಲ್ಲಿ ಆರೋಪಿ ಕೆಲಸ ಮಾಡುತ್ತಿದ್ದು, ಸಿ.ಸಿ.ಟಿ.ವಿ. ಕ್ಯಾಮೆರಾಗಳ ದೃಶ್ಯಾವಳಿ ಹಾಗೂ ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿರುವ ಘಟನೆಯ ದೃಶ್ಯವನ್ನು ಪರಿಶೀಲಿಸಿದ ಬಳಿಕ ಬಂಧಿಸಲಾಗಿದೆ’ ಎಂದು ತಿಳಿಸಿದ್ಧಾರೆ.
ಶಿಲಾದಿತ್ಯ ಅವರು ಪ್ರಕರಣ ದಾಖಲಾಗುವ ಮುನ್ನ ವಿಡಿಯೊ ಮಾಡಿ, ‘ಕರ್ನಾಟಕ ಏಕೆ ಹೀಗಾಯಿತು… ನನಗೆ ನಂಬಲು ಆಗುತ್ತಿಲ್ಲ. ದೇವರು ನಮಗೆ ಸಹಾಯ ಮಾಡುತ್ತಾನೆ. ಹಲ್ಲೆ ನಡೆಸಿರುವ ವ್ಯಕ್ತಿಯನ್ನು ಬಂಧಿಸಬೇಕು. ಪೊಲೀಸರು ಸರಿಯಾಗಿ ಸ್ಪಂದಿಸಿಲ್ಲ’ ಎಂದು ಆರೋಪಿಸಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಪರಸ್ಪರ ಹೊಡೆದಾಟ
ಘಟನೆಗೆ ಸಂಬಂಧಿಸಿದಂತೆ ಶಿಲಾದಿತ್ಯ ಬೋಸ್ ಮತ್ತು ವಿಕಾಸ್ ಕುಮಾರ್ ಅವರು ಪರಸ್ಪರ ಹೊಡೆದಾಡಿಕೊಂಡಿರುವ ವಿಡಿಯೊ ಜಾಲತಾಣದಲ್ಲಿ ಹರಿದಾಡುತ್ತಿದೆ. ಬೋಸ್ ಅವರು ವಿಕಾಸ್ ಅವರ ಕೊರಳ ಪಟ್ಟಿಗೆ ಕೈ ಹಾಕಿ ಹಲವು ಬಾರಿ ಕೈನಿಂದ ಗುದ್ದಿದ್ದಾರೆ. ವಿಕಾಸ್ ಕೆಳಗೆ ಬಿದ್ದರೂ ಬಿಡದೆ ಒದೆಯುತ್ತಿರುವ ದೃಶ್ಯ ಘಟನಾ ಸ್ಥಳದ ಬಳಿಯ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಲ್ಲದೇ ವಿಕಾಸ್ ಅವರ ದ್ವಿಚಕ್ರ ವಾಹನದ ಕೀಯನ್ನು ಕಿತ್ತುಕೊಂಡು ಬಿಸಾಡಿದ್ದಾರೆ. ಸ್ಥಳೀಯರು ಜಗಳ ಬಿಡಿಸಲು ಹರಸಾಹಸ ಪಟ್ಟ ದೃಶ್ಯವೂ ಸೆರೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.