ADVERTISEMENT

ವಿದ್ಯಾರ್ಥಿಗಳ ಕುತೂಹಲಕ್ಕೆ ಕಿಚ್ಚು ಹಚ್ಚಿದ ವಿಜ್ಞಾನಿ

ಅನ್ಯಗ್ರಹದಲ್ಲಿ ಜೀವವಿಕಾಸ ಸಾಧ್ಯತೆ ನಿಚ್ಚಳ: ಲೂಯಿಸ್‌ ಡಾರ್ಟ್‌ನೆಲ್‌ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 19:31 IST
Last Updated 31 ಜುಲೈ 2019, 19:31 IST
ಲೂಯಿಸ್ ಡಾರ್ಟ್‍ನೆಲ್ ಉಪನ್ಯಾಸ ನೀಡಿದರು
ಲೂಯಿಸ್ ಡಾರ್ಟ್‍ನೆಲ್ ಉಪನ್ಯಾಸ ನೀಡಿದರು   

ಬೆಂಗಳೂರು: ಅನ್ಯಗ್ರಹಗಳಲ್ಲಿ ಜೀವಿಗಳಿವೆಯೇ ಎಂಬ ಬಗ್ಗೆ ಸಂಶೋಧನೆ ನಡೆಸುವುದರ ಅಗತ್ಯವಾದರೂ ಏನು? ಬೇರೆ ಗ್ರಹಗಳಿಗೆ ಉಪಗ್ರಹಗಳನ್ನು ಕಳುಹಿಸಿ ಅಧ್ಯಯನ ನಡೆಸುವಾಗ ಭೂಮಿಯ ಜೀವಿಗಳು ಸೇರಿ ಅಲ್ಲಿನ ವಾತಾವರಣ ಕಲುಷಿತಗೊಳಿಸುವುದಿಲ್ಲವೇ?

ಬ್ರಿಟಿಷ್‌ ಕೌನ್ಸಿಲ್‌ ವತಿಯಿಂದ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅನ್ಯಗ್ರಹಗಳಲ್ಲಿ ಜೀವವಿಕಾಸದ ಕುರಿತು ಉಪನ್ಯಾಸ ನೀಡಿದ ಇಂಗ್ಲೆಂಡ್‌ನ ಖಭೌತ ಜೀವವಿಜ್ಞಾನಿ (ಆಸ್ಟ್ರೋಬಯಾಲಜಿ) ಲೂಯಿಸ್‌ ಡಾರ್ಟ್‌ನೆಲ್‌ ಅವರತ್ತ ತೂರಿಬಂದ ಪ್ರಶ್ನೆಗಳಿವು. ವಿದ್ಯಾರ್ಥಿಗಳ ಚೂಟಿ ಪ್ರಶ್ನೆಗಳಿಗೆ ಶಾಂತಚಿತ್ತರಾಗಿಯೇ ಡಾರ್ಟ್‌ನೆಲ್‌ ಉತ್ತರಿಸಿದರು.

‘ಅನ್ಯಗ್ರಹಗಳ ಜೀವಿಗಳ ಸಂಶೋಧನೆಯ ಅಗತ್ಯವೇನು’ ಎಂದು ಹೈದರಾಬಾದ್‌ನ ವಿದ್ಯಾರ್ಥಿಯ ಪ್ರಶ್ನೆಯನ್ನು ಡಾರ್ಟ್‌ನೆಲ್‌ ಅವರು ವಿದ್ಯಾರ್ಥಿಗಳತ್ತಲೇ ತೂರಿಬಿಟ್ಟರು. ಬಹುತೇಕ ವಿದ್ಯಾರ್ಥಿಗಳು ಕೈಎತ್ತುವ ಮೂಲಕ ಅಂತಹ ಸಂಶೋಧನೆಯ ಅಗತ್ಯವಿದೆ ಎಂದು ಸಹಮತ ವ್ಯಕ್ತ‍ಪಡಿಸಿದರು.

ADVERTISEMENT

‘ಅನೇಕ ವೈಜ್ಞಾನಿಕ ಸಂಶೋಧನೆಗಳು ಹಿಂದೆಂದೂ ಊಹಿಸದಷ್ಟು ಅಚ್ಚರಿಯ ಫಲಿತಾಂಶ ಕೊಟ್ಟಿವೆ. ಅನ್ಯಗ್ರಹ ಜೀವಿಗಳ ಬಗ್ಗೆ ನಡೆಸುವ ಸಂಶೋಧನೆಯಿಂದಲೂ ಇಂತಹ ಪ್ರಯೋಜನಗಳಾಗಬಹುದು.ಇನ್ನು 20 ವರ್ಷಗಳಲ್ಲಿ ಅನ್ಯಗ್ರಹದಲ್ಲಿ ಜೀವಿಗಳು ಪತ್ತೆಯಾಗುವ ವಿಶ್ವಾಸವಿದೆ’ ಎಂದು ತಿಳಿಸಿದರು.

‘ಅನ್ಯಗ್ರಹ ಜೀವಿಗಳು ಖಂಡಿತಾ ಹಾಲಿವುಡ್‌ ಸಿನಿಮಾಗಳಲ್ಲಿ ತೋರಿಸುವಂತಿರುವುದಿಲ್ಲ’ ಎಂದು ಚಟಾಕಿ ಹಾರಿಸಿದರು.

‘ಭೂಮಿಯಿಂದ ಕಳುಹಿಸುವ ಉಪಕರಣಗಳ ಮೂಲಕ ಇಲ್ಲಿನ ಜೀವಿಗಳು ಅನ್ಯಗ್ರಹ ಸೇರದಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗುತ್ತದೆ. ಉಪಕರಣಗಳನ್ನು ಕ್ರಿಮಿನಾಶಕಗೊಳಿಸಿದ ಬಳಿಕವೇ ಅವುಗಳನ್ನು ಶೋಧ ಕಾರ್ಯಕ್ಕೆ ಬಳಸಲಾಗುತ್ತದೆ’ ಎಂದರು.

‘ಅನ್ಯಗ್ರಹಗಳ ವಾತಾವರಣ ಕಲುಷಿತಗೊಳ್ಳುವುದನ್ನು ತಪ್ಪಿಸಲು ಬೇರೆ ದಾರಿಯೂ ಇದೆ. ಉದಾಹರಣೆಗೆ ಮಂಗಳ ಗ್ರಹದ ಬಗ್ಗೆ ಸಂಶೋಧನೆ ನಡೆಸಬೇಕಾದರೆ, ಇಲ್ಲಿನ ಪ್ರಯೋಗಾಲಯದಲ್ಲಿ ಅಲ್ಲಿರುವಂತಹ ವಾತಾವರಣ ಸೃಷ್ಟಿಸಲು ಸಾಧ್ಯವಿದೆ. ಇಂತಹ ಪ್ರಯತ್ನಗಳೂ ನಡೆದಿವೆ’ ಎಂದರು.

‘ಅನ್ಯಗ್ರಹಗಳಲ್ಲಿ ವೈರಸ್‌ನಂತಹ ಜೀವಿಗಳಿಗಾಗಿ ಹುಡುಕಾಟ ನಡೆಸಬಹುದಲ್ಲವೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಡಾರ್ಟ್‌ನೆಲ್‌, ‘ವೈರಸ್‌ ಪರಾವಲಂಬಿ ಜೀವಿ. ಅದರ ಚಟುವಟಿಕೆಗೆ ಇನ್ನೊಂದು ಜೀವಿಯ ಅಗತ್ಯವಿದೆ. ಜೈವಿಕ ವ್ಯವಸ್ಥೆಯಲ್ಲಿ ಅದು ಮಾಹಿತಿ ಮಾತ್ರ. ಆದರೂ ಅನ್ಯಗ್ರಹದಲ್ಲಿ ವೈರಸ್‌ ಕಂಡು ಬಂದರೂ ಅದನ್ನು ಅತಿದೊಡ್ಡ ಯಶಸ್ಸು ಎಂದೇ ಪರಿಗಣಿಸಬೇಕಾಗುತ್ತದೆ.ಕ್ಲಿಷ್ಟ ಸನ್ನಿವೇಶಗಳಲ್ಲೂ ಡಿಎನ್‌ಎ ಲಕ್ಷಗಟ್ಟಲೆ ವರ್ಷ ಉಳಿದುಕೊಳ್ಳಬಲ್ಲುದು. ಜೀವಿಯ ಡಿಎನ್‌ಎ ಅಥವಾ ಆರ್‌ಎನ್ಎ ಸಿಕ್ಕಿದರೂ ಅದರಿಂದ ಸಂಶೋಧನೆಗೆ ಸಾಕಷ್ಟು ಪ್ರಯೋಜನವಿದೆ’ ಎಂದರು.

ಇಟಲಿಯ ಖಭೌತ ವಿಜ್ಞಾನಿ ಎನ್ರಿಕೊ ಫರ್ಮಿ ಪ್ರತಿಪಾದಿಸಿದ್ದ, ‘ಅನ್ಯಗ್ರಹಗಳಲ್ಲಿ ಜೀವವಿಕಾಸ ಸಾಧ್ಯವಿಲ್ಲ’ ಎಂಬ ಸಿದ್ಧಾಂತವನ್ನು ಡಾರ್ಟ್‌ನೆಲ್‌ ಅಲ್ಲಗಳೆದರು. ‘ಈ ಸಿದ್ಧಾಂತವನ್ನು ಒಪ್ಪಲು ಸಾಧ್ಯವಿಲ್ಲ. ಇತರ ನಕ್ಷತ್ರಗಳಿಗೆ ಸಂಬಂಧಿಸಿದ ಸೌರಮಂಡಲ ವ್ಯವಸ್ಥೆಯಲ್ಲಿ ಭೂಮಿಯಂತಹ ಸೂಕ್ತ ವಾತಾವರಣ ಇಲ್ಲ ಎನ್ನಲಾಗದು. ತೀರ ಉಷ್ಣವೂ ಅಲ್ಲದ, ತೀವ್ರ ಶೀತದ ವಾತಾವರಣವೂ ಇಲ್ಲದ ಗ್ರಹಗಳಲ್ಲಿ ಜೀವಿಗಳು ವಿಕಾಸವಾಗುವಸಾಧ್ಯತೆ ಖಂಡಿತಾ ಇದೆ’ ಎಂದು ತಿಳಿಸಿದರು.

‘ವಿಶ್ವದ ವಿಕಾಸದ ಪಥದಲ್ಲಿ ಒಂದು ಗ್ರಹ ಮತ್ತೊಂದಕ್ಕೆ ಡಿಕ್ಕಿ ಹೊಡೆದಾಗ ಒಂದರಲ್ಲಿದ್ದ ರಾಸಾಯನಿಕ ಪದಾರ್ಥಗಳು ಇನ್ನೊಂದಕ್ಕೆ ಸೇರಿರುವ ಸಾಧ್ಯತೆ ಅಲ್ಲಗಳೆಯಲಾಗದು. ಮಂಗಳ ಹಾಗೂ ಭೂಮಿಯ ವಿಚಾರದಲ್ಲೂ ಇದೇ ರೀತಿ ಆಗಿರಬಹುದು. ಡಿಕ್ಕಿ ಹೊಡೆದು ಅನ್ಯಗ್ರಹದಿಂದ ಹಾರಿದ ಜೈವಿಕ ಅಂಶಗಳು ವಿಕಾಸ ಹೊಂದಿ ಭೂಮಿಯಲ್ಲೂ ಜೀವಿಗಳ ಉಗಮ ಆಗಿರಬಹುದು’ ಎಂದರು.

ಬೆಂಗಳೂರಿನ ವಿದ್ಯಾರ್ಥಿಗಳ ಜೊತೆಗೆ ಚೆನ್ನೈ ಹಾಗೂ ಹೈದರಾಬಾದ್‌ನ ವಿದ್ಯಾರ್ಥಿಗಳೂ ವಿಡಿಯೊ ಕಾನ್ಫರೆನ್ಸ್‌ ಮೂಲಕ ಈ ಉಪನ್ಯಾಸ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು.

‘ಚಂದ್ರಯಾನ–2’ಕ್ಕೆ ಮೆಚ್ಚುಗೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಕೈಗೊಂಡಿರುವ ‘ಚಂದ್ರಯಾನ–2’ ಯೋಜನೆ ಬಗ್ಗೆ ಡಾರ್ಟ್‌ನೆಲ್‌ ಮೆಚ್ಚುಗೆ ವ್ಯಕ್ತಪಡಿಸಿದರು.

‘ಮಾನವಕುಲದಲ್ಲೇ ಮೈಲಿಗಲ್ಲಾಗುವಂತಹ ಪ್ರಯತ್ನವಿದು. ಮಂಗಳಕ್ಕೆ ಮನುಷ್ಯರನ್ನು ಕಳುಹಿಸುವ ಮುನ್ನ ಚಂದ್ರನಲ್ಲಿಗೆ ಮನುಷ್ಯರನ್ನು ಕಳುಹಿಸುವುದು ತೀರಾ ಅವಶ್ಯಕ. ಬಾಹ್ಯಾಕಾಶಕ್ಕೆ ಮನುಷ್ಯರನ್ನು ಕಳುಹಿಸುವುದಕ್ಕೆ ಇದೊಂದು ಉತ್ತಮ ತಾಲೀಮು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.