ADVERTISEMENT

ಬಾಡಿಗೆ ತಾಯಿ ಹೊಟ್ಟೆಗೆ ಒದ್ದು ಗರ್ಭಪಾತ

ಹಣ ನೀಡದಿದ್ದಕ್ಕೆ ಮಹಿಳಾ ಸಂಘಟನೆ ಸದಸ್ಯೆಯರಿಂದ ಹಲ್ಲೆ; ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2020, 22:36 IST
Last Updated 15 ಮಾರ್ಚ್ 2020, 22:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ತಮಗೆ ಹಣ ನೀಡಲಿಲ್ಲವೆಂಬ ಕಾರಣಕ್ಕೆ ಮಹಿಳಾ ಸಂಘಟನೆ ಸದಸ್ಯೆಯರು ಬಾಡಿಗೆ ತಾಯಿಯೊಬ್ಬರ ಮೇಲೆ ಹಲ್ಲೆ ಮಾಡಿ ಗರ್ಭಪಾತಕ್ಕೆ ಕಾರಣವಾಗಿದ್ದು, ಈ ಸಂಬಂಧ ಬೇಗೂರು ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

‘ಬೊಮ್ಮನಹಳ್ಳಿಯ ಸ್ವಾತಿ ಮಹಿಳಾ ಸಂಘಟನೆಯವರು ಎಂದು ಹೇಳಿಕೊಂಡು ಪೇಯಿಂಗ್‌ ಗೆಸ್ಟ್‌ ಕಟ್ಟಡಕ್ಕೆ ನುಗ್ಗಿದ್ದ ಪ್ರಮೀಳಾ, ಪ್ರೇಮಾ, ರೀಟಾ, ಪೂಜಾ, ಆಶಾ ಹಾಗೂ ಮಂಜುನಾಥ್ ಎಂಬುವರು ನನ್ನ ಹೊಟ್ಟೆಗೆ ಒದ್ದು ಹಲ್ಲೆ ಮಾಡಿದ್ದಾರೆ. ಇದರಿಂದಾಗಿ ರಕ್ತಸ್ರಾವವಾಗಿ ಗರ್ಭಪಾತವಾಗಿದೆ’ ಎಂದು ಆರೋಪಿಸಿ 27 ವರ್ಷದ ಮಹಿಳೆ ದೂರು ನೀಡಿದ್ದಾರೆ.

‘ಅಕ್ರಮವಾಗಿ ಗುಂಪು ಸೇರುವುದು (ಐಪಿಸಿ 149), ಗರ್ಭಪಾತ (ಐಪಿಸಿ 313),ದರೋಡೆ (ಐಪಿಸಿ 384),ಹಲ್ಲೆ (ಐಪಿಸಿ 323),ಜೀವ ಬೆದರಿಕೆ (ಐಪಿಸಿ 506) ಹಾಗೂ ಮಹಿಳೆ ಗೌರವಕ್ಕೆ ಧಕ್ಕೆ ತಂದ (ಐಪಿಸಿ 354) ಆರೋಪದಡಿ ಪ್ರಮೀಳಾ ಸೇರಿ ಆರು ಮಂದಿ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

ನಾಲ್ಕು ತಿಂಗಳ ಗರ್ಭಿಣಿ: ‘ದೂರುದಾರ ಮಹಿಳೆಗೆ ಹಣದ ಅವಶ್ಯಕತೆ ಇತ್ತು. ಅದಕ್ಕಾಗಿ ಕಾನೂನು ಪ್ರಕಾರ ಬಾಡಿಗೆ ತಾಯಿ ಆಗಲು ದಂಪತಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ನಂತರ, ಆಸ್ಪತ್ರೆಯೊಂದರಲ್ಲಿ ಪ್ರನಾಳ ಶಿಶು ವಿಧಾನದ ಮೂಲಕ ಗರ್ಭ ಧರಿಸುವಂತೆ ಮಾಡಲಾಗಿತ್ತು. ಗರ್ಭಿಣಿಯಾದ ಮಹಿಳೆಯನ್ನು ಸಂಸ್ಥೆಯೊಂದರ ಸಿಬ್ಬಂದಿ ಆರೈಕೆ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಪೇಯಿಂಗ್ ಗೆಸ್ಟ್‌ ಕಟ್ಟಡದಲ್ಲಿ ವಾಸವಿದ್ದ ಮಹಿಳೆ ಗರ್ಭ ಧರಿಸಿ ನಾಲ್ಕು ತಿಂಗಳಾಗಿತ್ತು. ಕಟ್ಟಡಕ್ಕೆ ನುಗ್ಗಿದ್ದ ಆರೋಪಿಗಳು, ‘ಹಣಕ್ಕಾಗಿ ನೀನು ಬಾಡಿಗೆ ತಾಯಿ ಆಗಿದ್ದಿಯಾ. ದಂಪತಿಯು ನಿನಗೆ ನೀಡುವ ಹಣದಲ್ಲಿ ನಮಗೂ ಪಾಲು ನೀಡಬೇಕು. ಇಲ್ಲದಿದ್ದರೆ, ನಿನ್ನನ್ನು ಸುಮ್ಮನೇ ಬಿಡುವುದಿಲ್ಲ’ ಎಂದು ಮಹಿಳೆಯನ್ನು ಆರೋಪಿಗಳು ಬೆದರಿಸಿದ್ದರು. ಅದಕ್ಕೆ ಮಹಿಳೆ ಒಪ್ಪಿರಲಿಲ್ಲ.’

‘ಮಾ. 11ರಂದು ರಾತ್ರಿ ಪೇಯಿಂಗ್ ಗೆಸ್ಟ್ ಕಟ್ಟಡಕ್ಕೆ ನುಗ್ಗಿದ್ದ ಆರೋಪಿಗಳು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಕಾಲಿನಿಂದ ಹೊಟ್ಟೆಗೆ ಒದ್ದು ಹಲ್ಲೆ ಮಾಡಿದ್ದರು. ಬಿಡಿಸಲು ಬಂದವರಿಗೂ ಹೊಡೆದಿದ್ದರು. ಸ್ಥಳದಲ್ಲೇ ಕುಸಿದು ಬಿದ್ದ ಮಹಿಳೆಗೆ ರಕ್ತಸ್ರಾವವಾಗಿತ್ತು. ಕಟ್ಟಡದಲ್ಲೇ ಇದ್ದ ಕೆಲವರು ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ತಪಾಸಣೆ ನಡೆಸಿದ ವೈದ್ಯರು, ಗರ್ಭಪಾತವಾಗಿರುವಾಗಿ ಹೇಳಿದರು’ ಎಂದು ಪೊಲೀಸರು ವಿವರಿಸಿದರು.

‘ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.