ADVERTISEMENT

ನಾದಿನಿಗೆ ಚಾಕುವಿನಿಂದ ಇರಿದು ವ್ಯಕ್ತಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 20:18 IST
Last Updated 28 ನವೆಂಬರ್ 2020, 20:18 IST

ಬೆಂಗಳೂರು: ಮದುವೆಯಾಗಲು ನಿರಾಕರಿಸಿದರು ಎಂಬ ಕಾರಣಕ್ಕೆ ನಾದಿನಿಗೆ ಚಾಕುವಿನಿಂದ ಇರಿದ ವ್ಯಕ್ತಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಲಹಂಕ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

‘ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ. ಚಾಕು ಇರಿತದಿಂದ ಗಾಯಗೊಂಡಿರುವ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಆಹಾರವನ್ನು ತಲುಪಿಸುವ ಕೆಲಸ ಮಾಡುತ್ತಿದ್ದ ನಾಗರಾಜ್, ಪ್ರೇಮಾ ಎಂಬುವರನ್ನು ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಪ್ರೇಮಾ ಅವರಿಗೆ ತಂಗಿ ಇದ್ದು, ಅವರು ಸಹ ಅಕ್ಕನ ಜೊತೆಯಲ್ಲಿದ್ದರು. ತನ್ನನ್ನು ಮದುವೆಯಾಗುವಂತೆ ನಾಗರಾಜ್‌ ನಾದಿನಿಯನ್ನು ಒತ್ತಾಯಿಸುತ್ತಿದ್ದರು.’

ADVERTISEMENT

‘ಹೆಂಡತಿ ಇಲ್ಲದಿರುವ ಸಮಯದಲ್ಲಿ ನಾದಿನಿ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ನಾಗರಾಜ್, ‘ನಿನ್ನನ್ನು ಪ್ರೀತಿಸುತ್ತಿದ್ದೇನೆ. ಒಪ್ಪಿದರೆ, ಮದುವೆಯಾಗುತ್ತೇನೆ’ ಎಂದು ಪೀಡಿಸುತ್ತಿದ್ದರು. ಮದುವೆ ಇಷ್ಟವಿಲ್ಲವೆಂದು ನಾದಿನಿ ಹೇಳಿದ್ದರು. ಈ ಸಂಬಂಧ ಹಲವು ಬಾರಿ ಜಗಳ ಆಗಿತ್ತು. ಕೋಪಗೊಂಡಿದ್ದ ಆರೋಪಿ, ಇದೇ 26ರಂದು ಬೆಳಿಗ್ಗೆ ತರಕಾರಿ ಕತ್ತರಿಸುವ ಚಾಕುವಿನಿಂದ ನಾದಿನಿಗೆ ಇರಿದಿದ್ದರು. ಎದೆ, ಹೊಟ್ಟೆ ಹಾಗೂ ಭುಜಕ್ಕೆ ಗಾಯವಾಗಿ ನಾದಿನಿ ಅವರಿಗೆ ತೀವ್ರ ರಕ್ತಸ್ರಾವವಾಗಿತ್ತು. ಸಹಾಯಕ್ಕೆ ಬಂದ ಸ್ಥಳೀಯರೇ ಆಸ್ಪತ್ರೆಗೆ ಸೇರಿಸಿದ್ದರು’ ಎಂದೂ ಪೊಲೀಸರು ಹೇಳಿದರು.

‘ಕೃತ್ಯದ ಬಳಿಕ ಮನೆಯಿಂದ ಪರಾರಿಯಾಗಿದ್ದ ನಾಗರಾಜ್, ಚಾಕುವಿನಿಂದ ಇರಿದುಕೊಂಡಿದ್ದರು. ನಂತರ, ವಿಷವನ್ನೂ ಕುಡಿದಿದ್ದರು. ತೀವ್ರ ಅಸ್ವಸ್ಥಗೊಂಡು ಅವರು ಮೃತಪಟ್ಟಿದ್ದಾರೆ’ ಎಂದೂ ತಿಳಿಸಿದರು.

‘ಪತ್ನಿ ಪ್ರೇಮಾ ಹಾಗೂ ಅವರ ತಂಗಿ ಹೆಸರಿನಲ್ಲಿ ಆಸ್ತಿ ಇತ್ತು. ಅದನ್ನು ತನ್ನದಾಗಿಸಿಕೊಳ್ಳಲು ನಾಗರಾಜ್ ಪ್ರಯತ್ನಿಸುತ್ತಿದ್ದರು. ಅದೇ ಕಾರಣಕ್ಕೆ ಇಬ್ಬರನ್ನೂ ಮದುವೆಯಾಗಲು ಆತನ ಯೋಚಿಸಿದ್ದರು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.